ಹೋಶಂಗಾಬಾದ್: ಕಾಂಗ್ರೆಸ್ ಸದಾ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸುತ್ತದೆ. ಆದರೆ, ಬಿಜೆಪಿ ಸರ್ಕಾರ ಅವರನ್ನು ಗೌರವಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಧ್ಯಪ್ರದೇಶದ ಹೋಶಂಗಾಬಾದ್‌ನಲ್ಲಿ ಏರ್ಪಡಿಸಲಾಗಿದ್ದ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಡಾ.
ಬಿ.ಆರ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಕಾರಣದಿಂದಾಗಿ ಬುಡಕಟ್ಟು ಮಹಿಳೆಯೊಬ್ಬರು ದೇಶದ ರಾಷ್ಟ್ರಪತಿಯಾಗಿದ್ದಾರೆ. ಕಾಂಗ್ರೆಸ್ ಎಂದಿಗೂ ಆದಿವಾಸಿಗಳ (ಬುಡಕಟ್ಟು ಜನಾಂಗದವರ) ಕೊಡುಗೆಯನ್ನು ಗುರುತಿಸಲಿಲ್ಲ. ಆದರೆ, ಬಿಜೆಪಿ ಸರ್ಕಾರ ಆ ಜನರನ್ನು ಗೌರವಿಸಿದೆ' ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, 'ನಾನು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾದರೆ ಇಡೀ ದೇಶವೇ ಹೊತ್ತಿ ಉರಿಯುತ್ತದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ದೇಶ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ನಿರ್ಧರಿಸಲು 'ಇಂಡಿಯಾ' ಮೈತ್ರಿಕೂಟಕ್ಕೆ ಸಾಧ್ಯವಾಗುತ್ತಿಲ್ಲ' ಎಂದಿದ್ದಾರೆ.
'ಮೋದಿಗೆ ಯಾವ ಕನಸುಗಳು ಇಲ್ಲ, ನಿಮ್ಮ (ಜನರ) ಕನಸುಗಳೇ ನನ್ನ ಧ್ಯೇಯವಾಗಿದೆ' ಎಂದು ಅವರು ಹೇಳಿದ್ದಾರೆ.