ತಿರುವನಂತಪ್ಪುರಂ: ದೇವರ ಉತ್ಸವದಲ್ಲಿ ಪಾಲ್ಗೊಂಡಿದ್ದ ಆನೆಯೊಂದು ಮದವೇರಿ ನೋಡ ನೋಡುತ್ತಿದ್ದಂತೆ ಮಾವುತನನ್ನು ತುಳಿದು ಸಾಯಿಸಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ವೈಕೋಂ ತಾಲ್ಲೂಕಿನ ಟಿವಿ ಪುರಂನಲ್ಲಿರುವ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.
ಮೃತ ಮಾವುತನನ್ನು ಅರವಿಂದ್ (26) ಎಂದು ಗುರುತಿಸಲಾಗಿದ್ದು, ಆನೆ ಮಾವುತನನ್ನು ತುಳಿದು ಸಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕುಂಜುಲಕ್ಷ್ಮೀ ಎಂಬ ಹೆಸರಿನ ಆನೆಯನ್ನು ದೇವರ ಉತ್ಸವದ ಅಂಗವಾಗಿ ನೆಟ್ಟಿಪಟ್ಟಿಯನ್ನು ಕಟ್ಟಲಾಗುತ್ತಿತ್ತು. ಈ ವೇಳೆ ನೋಡ ನೋಡುತ್ತಿದ್ದಂತೆ ಮದವೇರಿ ಮೇಲಕ್ಕೆ ಎದ್ದ ಆನೆ ಮಾವುತ ಅರವಿಂದ್ನನ್ನು ಕೆಳಗೆ ಹಾಕಿ ಹೊಸಕಲು ಶುರು ಮಾಡುತ್ತದೆ. ಇದನ್ನು ನೋಡಿದ ಮತ್ತೋರ್ವ ಮಾವುತ ಆನೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. ಕೂಡಲೇ ಗಾಯಾಳುವನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗಂಭೀರವಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.