ಕಾಸರಗೋಡು: ಹಳೇ ಸೂರ್ಲು ಮದ್ರಸಾ ಶಿಕ್ಷಕ, ಮೂಲತ: ಕೊಡಗು ನಿವಾಸಿ ಮಹಮ್ಮದ್ ರಿಯಾಸ್ ಮೌಲವಿ(28)ಕೊಲೆ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ ಪ್ರಕರಣದ ವಿರುದ್ಧ ಹೈಕೋರ್ಟಿಗೆ ಸಲ್ಲಿಸಲಾದ ಅಪೀಲಿನ ಹಿನ್ನೆಲೆಯಲ್ಲಿ ಎಲ್ಲ ಮೂರು ಮಂದಿ ಆರೋಪಿಗಳನ್ನು ಹತ್ತು ದಿವಸದೊಳಗೆ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಖುದ್ದು ಹಾಜರಾಗುವಂತೆ ಹೈಕೋರ್ಟು ವಿಭಾಗೀಯ ಪೀಠ ಆದೇಶಿಸಿದೆ.
ಅಲ್ಲದೆ ತಲಾ 50ಸಾವಿರ ರೂ.ಮೊತ್ತದ ಸ್ವಂತ ಮುಚ್ಚಳಿಕೆ ಮತ್ತು ಈ ಮೊತ್ತಕ್ಕೆ ಸಮಾನವಾಘಿ ಇಬ್ಬರು ವಯಕ್ತಿಗಳ ಜಾಮೀನನ್ನು ಮುಚ್ಚಳಿಕೆ ರೂಪದಲ್ಲಿ ಸಲ್ಲಿಸುವಂತೆಯೂ ನ್ಯಾಯಾಲಯ ನಿರ್ದೇಶಿಸಿದೆ. ಇದನ್ನು ಪಾಲಿಸದಿದ್ದಲ್ಲಿ ಆರೋಪಿಗಳ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಬೇಕು. ಮುಚ್ಚಳಿಕೆ ಸಮರ್ಪಿಸಿದಲ್ಲಿಒ, ಜಿಲ್ಲಾ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಿಂದ ಹೊರಕ್ಕೆ ತೆರಳದಂತೆ ನಿರ್ಬಂಧ ಹೇರಿ ಆರೋಪಿಗಳಿಗೆ ಜಾಮೀನು ಮಂಜೂರುಮಾಡುವಂತೆಯೂ ಹೈಕೋರ್ಟು ಸ್ಪಷ್ಟಪಡಿಸಿದೆ.
ಮಹಮ್ಮದ್ ರಿಯಾಸ್ ಮೌಲವಿ ಕೊಲೆ ಪ್ರಕರಣದ ಆರೋಪಿಗಳಾದ ಕಾಸರಗೋಡು ಕೇಳುಗುಡ್ಡೆ ನಿವಾಸಿಗಳಾದ ಅಜೇಶ್ ಅಲಿಯಾಸ್ ಅಪ್ಪು(20), ಕೇಳುಗುಡ್ಡೆ ಗಂಗೆ ಕುಟೀರದ ಅಖಿಲೇಶ್ ಅಲಿಯಾಸ್ ಅಖಿಲ್(25) ಹಾಗೂ ಕೇಳುಗುಡ್ಡೆ ನಿವಾಸಿ ನಿತಿನ್(19)ಎಂಬವರನ್ನು ಇತ್ತೀಚೆಗೆ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ಕೇರಳ ಸರ್ಕಾರ ಹೈಕೋರ್ಟಿಗೆ ಸಲ್ಲಿಸಲಾದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಜಯಶಂಕರನ್ ನಂಬ್ಯಾರ್ ಹಾಗೂ ನ್ಯಾಯಮೂರ್ತಿ ವಿ.ಎಂ. ಶ್ಯಾಮ್‍ಕುಮಾರ್ ಅವರನ್ನೊಳಗೊಂಡ ಹೈಕೋರ್ಟಿನ ವಿಭಾಗೀಯ ಪೀಠ ವಿಚಾರಣೆಗಾಗಿ ಕೈಗೆತ್ತಿಕೊಂಡು ಈ ಆದೇಶ ನೀಡಿದೆ.
2017 ಮಾ 20ರಂದು ರಾತ್ರಿ ಹಳೇ ಸೂರ್ಲು ಸನಿಹದ ಮದ್ರಸಾದ ಕೊಠಡಿಯಲ್ಲಿ ತಂಗಿದ್ದ ಮಹಮ್ಮದ್ ರಿಯಾಸ್ ಮೌಲವಿ ಅವರನ್ನು ತಂಡವೊಂದು ಬರ್ಬರವಾಗಿ ಕೊಲೆ ನಡೆಸಿತ್ತು.