ನವದೆಹಲಿ: ಲೋಕಸಭೆ ಚುನಾವಣೆ ಪ್ರಚಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲೇ ಅಯೋಧ್ಯೆಯ ಬಾಲರಾಮನ ಹಣೆಗೆ 'ಸೂರ್ಯ ತಿಲಕ' ಸ್ಪರ್ಶಿಸಿದ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಇಂದು (ಬುಧವಾರ) ಅಸ್ಸಾಂನಲ್ಲಿ ನಡೆಯಲಿರುವ
ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಹಾಗಾಗಿ ಪ್ರಯಾಣದ ನಡುವೆಯೇ ಬಾಲರಾಮನಿಗೆ 'ಸೂರ್ಯ ತಿಲಕ' ಸ್ಪರ್ಶಿಸಿದ ಕ್ಷಣವನ್ನು ವೀಕ್ಷಿಸುತ್ತಿರುವ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಪಾದರಕ್ಷೆಗಳಿಲ್ಲದೆ ದೇವರ ಸ್ಮರಣೆಯಲ್ಲಿ ಭಾಗವಹಿಸುವ ಮೂಲಕ ಮೋದಿ ಗಮನ ಸೆಳೆದಿದ್ದಾರೆ.
ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಅಸ್ಸಾಂನ ನಲ್ಬರಿಯಲ್ಲಿ ಚುನಾವಣಾ ರ್‍ಯಾಲಿ ಬಳಿಕ ನಾನು ಬಾಲರಾಮನ 'ಸೂರ್ಯ ತಿಲಕ'ವನ್ನು ವೀಕ್ಷಿಸಿದೆ. ಕೋಟ್ಯಂತರ ಭಾರತೀಯರಂತೆ ನನಗೂ ಇದು ಅತ್ಯಂತ ಭಾವನಾತ್ಮಕ ಕ್ಷಣ. ಅಯೋಧ್ಯೆಯ ರಾಮನವಮಿಯು ಐತಿಹಾಸಿಕವಾಗಿದೆ. ಸೂರ್ಯ ತಿಲಕವು ನಮ್ಮೆಲ್ಲರಿಗೂ ಶಕ್ತಿಯನ್ನು ತರಲಿ ಮತ್ತು ನಮ್ಮ ರಾಷ್ಟ್ರದ ವೈಭವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಪ್ರೇರೇಪಿಸಲಿ' ಎಂದು ಬರೆದುಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಸರ್ವಾಲಂಕೃತ ಬಾಲರಾಮನ ಹಣೆಗೆ ಸೂರ್ಯ ರಶ್ಮಿ ಸ್ಪರ್ಶಿಸಿದ್ದು, ಸುಮಾರು 4 ನಿಮಿಷಗಳ ಕಾಲ ಸೂರ್ಯ ರಶ್ಮಿ ತಿಲಕದಂತೆ ರಾಮನ ಹಣೆ ಮೇಲೆ ಕಂಗೊಳಿಸಿತು.
ಕಳೆದ ವಾರ ಬಾಲರಾಮನ ಹಣೆಗೆ ಸೂರ್ಯ ತಿಲಕವಿಡುವ ಪ್ರಯೋಗ ಮಾಡಲಾಗಿತ್ತು. ಇದು ಯಶಸ್ವಿಯಾಗಿತ್ತು. ಇಂದು ರಾಮ ಜನಿಸಿದ ಸಮಯಕ್ಕೆ ಸರಿಯಾಗಿ ಸೂರ್ಯನ ಕಿರಣ ಹಣೆಯನ್ನು ಸ್ಪರ್ಶಿಸಿದೆ.
58 ಮಿ.ಮೀ. ಗಾತ್ರದ ಸೂರ್ಯ ರಶ್ಮಿಯು ಬಾಲರಾಮನ ಹಣೆಯ ಕೇಂದ್ರದಲ್ಲಿ ಸುಮಾರು ಮೂರರಿಂದ ಮೂರೂವರೆ ನಿಮಿಷಗಳ ಕಾಲ ಬೆಳಗಿದೆ ಎಂದು ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.