ಕೊಚ್ಚಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ನ ರಾಜಕೀಯ ಮುಖವಾಗಿರುವ ಎಸ್ ಡಿಪಿಐ ಲೋಕಸಭೆ ಚುನಾವಣೆಯಲ್ಲಿ ಯುಡಿಎಫ್ ಗೆ ಬೆಂಬಲ ನೀಡುವುದಾಗಿ ಘೋಷಿಸಿದೆ.
ರಾಜ್ಯಾಧ್ಯಕ್ಷ ಮೂವಟುಪುಳ ಅಶ್ರಫ್ ಮೌಲವಿ ಈ ಕುರಿತು ಮಾಹಿತಿ ನೀಡಿದ್ದರು. ಪ್ರಸ್ತುತ ರಾಷ್ಟ್ರೀಯ ಪರಿಸ್ಥಿತಿಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್‍ಡಿಪಿಐ ಎಲ್ಲಿಯೂ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ. ಕೇರಳದ ಹೊರಗೆ 18 ಕ್ಷೇತ್ರಗಳಲ್ಲಿ ಎಸ್‍ಡಿಪಿಐ ಸ್ಪರ್ಧಿಸುತ್ತಿದೆ ಎಂದು ಅಶ್ರಫ್ ಮೌಲವಿ ಹೇಳಿದ್ದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ತುಳಸೀಧರನ್ ಪಳ್ಳಿಕಲ್, ಪ್ರಧಾನ ಕಾರ್ಯದರ್ಶಿ ರಾಯ್ ಅರೈಕಲ್ ಉಪಸ್ಥಿತರಿದ್ದರು.
ಮತ್ತೊಂದೆಡೆ, ಎಸ್‍ಡಿಪಿಐ ಬೆಂಬಲ ಬೇಡ ಎಂದು ಈಗಲೇ ಹೇಳಲು ಸಾಧ್ಯವಿಲ್ಲ, ಆಲೋಚಿಸಿ ನಿಲುವು ಸ್ಪಷ್ಟಪಡಿಸಲಾಗುವುದೆಂದು ಕೆಪಿಸಿಸಿ ಹಂಗಾಮಿ ಅಧ್ಯಕ್ಷ ಎಂ.ಎಂ.ಹಸನ್ ತಿಳಿಸಿದ್ದಾರೆ. ಎಲ್ಲರ ಮತವೂ ಸಮಾನ. ಎಸ್‍ಡಿಪಿಐ ಕೋಮುವಾದಿ ಪಕ್ಷ ಎಂಬುದರ ಬಗ್ಗೆ ಯುಡಿಎಫ್‍ಗೆ ಯಾವುದೇ ನಿರ್ದಿಷ್ಟ ನಿಲುವು ಇಲ್ಲ. ಈ ಬಗ್ಗೆ ಚುನಾವಣಾ ಆಯೋಗ ನಿರ್ಧರಿಸಬೇಕು ಎಂದು ಹಸನ್ ಹೇಳಿದ್ದಾರೆ. ಅವರು ಎರ್ನಾಕುಳಂ ಪ್ರೆಸ್ ಕ್ಲಬ್‍ನಲ್ಲಿ ಮುಖಾಮುಖಿಯಲ್ಲಿ ಈ ಬಗ್ಗೆ ಮಾತನಾಡುತ್ತಿದ್ದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಮುಖ ಪ್ರಚಾರ ವಿಷಯವನ್ನಾಗಿ ಮಾಡುತ್ತಿದ್ದಾರೆ. ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟು ಮುಖ್ಯಮಂತ್ರಿಗಳು ಮುಸಲ್ಮಾನರ ಒಲವಿಗೆ ಯತ್ನಿಸುತ್ತಿದ್ದಾರೆ ಎಂದು ಹಸನ್ ತಿಳಿಸಿದ್ದಾರೆ.