ದುಬೈ: ಮರುಭೂಮಿ ಪ್ರದೇಶವಾದ ಅರಬ್ ಸಂಯುಕ್ತ ಸಂಸ್ಥಾನದಲ್ಲಿ (ಯುಎಇ) ಮಂಗಳವಾರ ದಾಖಲೆಯ ಮಳೆಯಾಗಿದ್ದು, ವಿಶ್ವದ ಪ್ರಮುಖ ವಿಮಾನನಿಲ್ದಾಣಗಳಲ್ಲಿ ಒಂದಾದ ದುಬೈ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ ಮತ್ತು ವಿಮಾನಗಳ ಕಾರ್ಯಾಚರಣೆಗೆ ತೊಡಕಾಗಿದೆ.
'1949ರಿಂದ ಲಭ್ಯವಿರುವ ಹವಾಮಾನ ದತ್ತಾಂಶದ ಪ್ರಕಾರ, ಇದು ಐತಿಹಾಸಿಕ ಹವಾಮಾನ ಸಂದರ್ಭವಾಗಿದೆ' ಎಂದು ಅಲ್ಲಿಯ ಸರ್ಕಾರಿ ಸುದ್ದಿಸಂಸ್ಥೆ ಡಬ್ಲ್ಯುಎಎಂ ತಿಳಿಸಿದೆ.
ಸರ್ಕಾರವು ಮೋಡ ಬಿತ್ತನೆ ಮಾಡಿದ್ದೇ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಲು ಕಾರಣ ಎಂದು ಅಂದಾಜಿಸಲಾಗಿದೆ. ಇದೇವೇಳೆ, ಯುಎಇ ಜೊತೆ ಬಹರೈನ್, ಕತಾರ್, ಸೌದಿ ಅರೇಬಿಯಾ ದೇಶಗಳಲ್ಲೂ ಮಳೆ ಸುರಿದಿದೆ.
ಮೋಡ ಬಿತ್ತನೆ ಕಾರ್ಯಾಚರಣೆಯಲ್ಲಿ ಆರೇಳು ವಿಮಾನಗಳು ತೊಡಗಿದ್ದವು ಎಂದು ಯುಎಇ ರಾಷ್ಟ್ರೀಯ ಹವಾಮಾನ ಕೇಂದ್ರದ ಹವಾಮಾನ ತಜ್ಞರು ತಿಳಿಸಿದ್ದಾರೆ. ಮೋಡ ಬಿತ್ತನೆಗೆ ನಿಯೋಜಿಸಲಾಗಿರುವ ವಿಮಾನವೊಂದು ಭಾನುವಾರವೂ ಕಾರ್ಯಾಚರಣೆ ನಡೆಸಿದ್ದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ತಜ್ಞರು ನಿರಾಕರಿಸಿದ್ದಾರೆ.
ನೀರಿಗಾಗಿ ಯುಎಇ ನಿರ್ಲವಣೀಕರಣ ಘಟಕಗಳನ್ನೇ ಅವಲಂಬಿಸಿದೆ. ಹೀಗಾಗಿ, ಈಗಾಗಲೇ ಕಡಿಮೆಯಾಗುತ್ತಿರುವ ಮತ್ತು ಸೀಮಿತ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಲ್ಲಿಯ ಆಡಳಿತವು ಮೋಡ ಬಿತ್ತನೆ ನಡೆಸಿತ್ತು ಎನ್ನಲಾಗಿದೆ.
ಸೋಮವಾರ ರಾತ್ರಿಯಿಂದ ಮಳೆ ಸುರಿಯಲಾರಂಭಿಸಿದೆ. ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಗ್ರಹಿಸಿರುವ ದತ್ತಾಂಶದ ಪ್ರಕಾರ ಮಂಗಳವಾರದ ಅಂತ್ಯಕ್ಕೆ ಸುಮಾರು 142 ಮಿಲಿಮೀಟರ್ (5.59 ಇಂಚು) ಮಳೆಯಾಗಿದೆ. ದುಬೈ ವಿಮಾನನಿಲ್ದಾಣದಲ್ಲಿ ವಾರ್ಷಿಕ ಸರಾಸರಿ 94.7 ಮಿಲಿಮೀಟರ್ (3.73 ಇಂಚು) ಮಳೆಯಾಗುತ್ತದೆ.
ಪ್ರಯಾಣಿಕರ ಪರದಾಟ: ದುಬೈ ವಿಮಾನ ನಿಲ್ದಾಣದಿಂದ ಮಂಗಳವಾರ ರಾತ್ರಿ ಬಹುತೇಕ ವಿಮಾನಗಳ ಹಾರಾಟ ಸ್ಥಗಿತಗೊಂಡಿತು. ರನ್‌ವೇಯಲ್ಲಿ ನೀರು ತುಂಬಿದ್ದರಿಂದ ಟರ್ಮಿನಲ್ ತಲುಪಲೂ ಪ್ರಯಾಣಿಕರು ಪ್ರಯಾಸಪಟ್ಟರು. ಟ್ಯಾಕ್ಸಿಗಳ ಕಾರ್ಯಾಚರಣೆ ಕೂಡ ಸ್ಥಗಿತವಾಗಿದ್ದರಿಂದ ಪ್ರಯಾಣಿಕರು ಮಂಗಳವಾರ ರಾತ್ರಿ ಟರ್ಮಿನಲ್‌ನಲ್ಲಿಯೇ ಉಳಿಯಬೇಕಾಯಿತು.
ಅಡಚಣೆ ಕುರಿತು ಬುಧವಾರ ಬೆಳಿಗ್ಗೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದ ವಿಮಾನ ನಿಲ್ದಾಣ ಪ್ರಾಧಿಕಾರ, 'ಪ್ರವಾಹ ಪರಿಸ್ಥಿತಿಯಿಂದಾಗಿ ಸೀಮಿತ ಸಾರಿಗೆ ಸೌಕರ್ಯ ಒದಗಿಸಲಾಗುತ್ತಿದೆ. ಪರಿಸ್ಥಿತಿ ಸುಧಾರಿಸಲು ಸ್ವಲ್ಪ ಸಮಯ ಬೇಕಾಗುತ್ತದೆ' ಎಂದು ಹೇಳಿತ್ತು.
ವಿಮಾನನಿಲ್ದಾಣದ ಸಿಇಒ ಪಾಲ್ ಗ್ರಿಫಿತ್ಸ್ ಅವರು ಅಲ್ಲಿಯ ಸರ್ಕಾರಿ ರೇಡಿಯೊ ವಾಹಿನಿ ಮೂಲಕ ಸಂದೇಶ ರವಾನಿಸಿದ್ದಾರೆ. 'ಪ್ರವಾಹದ ಕಾರಣದಿಂದಾಗಿ ಹಲವಾರು ವಿಮಾನಗಳನ್ನು ಅಲ್-ಮಕ್ಟುಮ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಕಡೆ ತಿರುಗಿಸಲಾಗಿದೆ. ಈ ರೀತಿಯ ಹವಾಮಾನ ಪರಿಸ್ಥಿತಿಯನ್ನು ನನ್ನ ಜೀವಮಾನದಲ್ಲಿ ನೋಡಿಲ್ಲ. ಇದು ಅತ್ಯಂತ ಸವಾಲಿನ ಸಮಯವಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಹಿತ ಕಾಪಾಡುವ ದೃಷ್ಟಿಯಿಂದ ನಾವೆಲ್ಲರೂ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇವೆ' ಎಂದಿದ್ದಾರೆ.
ಜಲಾವೃತವಾಗಿರುವ ದುಬೈ ರಸ್ತೆಗಳು -ಎಎಫ್‌ಪಿ ಚಿತ್ರಜನಜೀವನ ಅಸ್ತವ್ಯಸ್ತ
ಯುಎಇ ಆದ್ಯಂತ ಶಾಲೆಗಳನ್ನು ಮುಚ್ಚಲಾಗಿದೆ. ಸರ್ಕಾರಿ ನೌಕರರು ತಾವಿರುವ ಸ್ಥಳಗಳಿಂದಲೇ ಕೆಲಸ ಮಾಡುತ್ತಿದ್ದಾರೆ. ಇತರ ವಲಯಗಳ ಸಿಬ್ಬಂದಿ ಮನೆಯಲ್ಲೇ ಇದ್ದಾರೆ. ಮನೆಯಿಂದ ಹೊರಹೋಗಿದ್ದ ಹಲವರ ವಾಹನಗಳು ಜಲಾವೃತ ರಸ್ತೆಗಳಲ್ಲೇ ಸಿಲುಕಿವೆ. ಮನೆಗಳು ಮತ್ತು ಬೀದಿಗಳಲ್ಲಿ ನಿಂತ ನೀರನ್ನು ಟ್ಯಾಂಕರ್ ಟ್ರಕ್‌ಗಳ ಸಹಾಯದಿಂದ ತೆರವು ಮಾಡಲಾಗುತ್ತಿದೆ. ಸಂಕಷ್ಟದಲ್ಲಿ ಸಿಲುಕಿದ್ದ ಹಲವು ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಮರುಭೂಮಿ ಪ್ರದೇಶವಾದ ಯುಎಇಯಲ್ಲಿ ಸಾಧಾರಣ ಮಳೆಯಾಗುವ ಕಾರಣ ನೀರು ಹರಿದುಹೋಗಲು ಸಮರ್ಪಕ ವ್ಯವಸ್ಥೆಯನ್ನು ಮಾಡಲಾಗಿಲ್ಲ. ಇದರಿಂದಾಗಿ ಸದಸ್ಯದ ಪರಿಸ್ಥಿತಿ ನಿರ್ವಹಣೆ ಅತ್ಯಂತ ಕಷ್ಟಕರವಾಗಿ ಪರಿಣಮಿಸಿದೆ ಎನ್ನಲಾಗಿದೆ.