ನವದೆಹಲಿ: ಈ ಶತಮಾನದ ಮಧ್ಯ ಭಾಗದಲ್ಲಿ ಜೀವ ವೈವಿಧ್ಯ ಕ್ಷೀಣಿಸಲಿದೆ. ಇದಕ್ಕೆ ಹವಾಮಾನ ಬದಲಾವಣೆಯು ಪ್ರಮುಖ ಕಾರಣವಾಗಲಿದೆ ಎಂದು ಜರ್ಮನ್ ಸೆಂಟರ್ ಫಾರ್ ಇಂಟೆರಾಗೆಟಿವ್ ಬಿಯೋಡೈವರ್ಸಿಟಿ ರಿಸರ್ಚ್ (ಐಡಿಐವಿ) ಸಂಸ್ಥೆಯ ಅಧ್ಯಯನವೊಂದರಿಂದ ತಿಳಿದುಬಂದಿದೆ.
ಭೂಬಳಕೆ ಸ್ವರೂಪದಲ್ಲಿ (ಕಟ್ಟಡ ನಿರ್ಮಾಣ, ಕೃಷಿ ಇತ್ಯಾದಿ ಚಟುವಟಿಕೆಗೆ ಬಳಸಿಕೊಂಡಿರುವ ಭೂಭಾಗ) ಆಗಿರುವ ಬದಲಾವಣೆ ಮತ್ತು ಅದರ ಪ್ರಭಾವ ಕುರಿತು ಸಂಶೋಧಕರು ಅಧ್ಯಯನ ನಡೆಸಿದ್ದಾರೆ.
'ಜಗತ್ತಿನ ಎಲ್ಲಾ ಪ್ರದೇಶಗಳ ಮಾದರಿಯನ್ನೂ ನಮ್ಮ ಅಧ್ಯಯನದಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿತ್ತು. ಈವರೆಗೂ ಪರಿಗಣನೆಗೆ ತೆಗೆದುಕೊಂಡಿರದ ಅಂಶಗಳ ಮೇಲೂ ಬೆಳಕು ಚೆಲ್ಲಿದ್ದೆವು' ಎಂದು ಐಡಿಐವಿ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಹೆನ್ರಿಕ್ ಪೆರೀರಾ ತಿಳಿಸಿದ್ದಾರೆ.
ಜೀವ ವೈವಿಧ್ಯ ಮತ್ತು ಪರಿಸರವ್ಯವಸ್ಥೆಯು ಭವಿಷ್ಯದಲ್ಲಿ ಹೇಗೆಲ್ಲ ರೂಪುಗೊಳ್ಳಲಿದೆ ಎಂದು ಪರೀಕ್ಷೆ ನಡೆಸಲಾಗುತ್ತಿದೆ. ಭೂಬಳಕೆಯ ಸ್ವರೂಪ ಮತ್ತು ಹವಾಮಾನ ಬದಲಾವಣೆಯ ಒಟ್ಟಾರೆ ಪರಿಣಾಮವು ಜಾಗತಿಕವಾಗಿ ಜೀವ ವೈವಿಧ್ಯದ ಮೇಲೆ ಯಾವ ಉಂಟಾಗಲಿದೆ ಎಂಬ ಕುರಿತು ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆಯಾ ಪ್ರದೇಶದ ನೀತಿಗಳು ಮತ್ತು ಜೀವ ವೈವಿಧ್ಯ ಸಂರಕ್ಷಣೆಯ ವಿಚಾರದಲ್ಲಿನ ತಿಕ್ಕಾಟ ಕಡಿಮೆ ಮಾಡುವ ನಿಟ್ಟಿನಲ್ಲಿ 'ಪ್ರಾಮಾಣಿಕವಾದ ಸಮಗ್ರ ಮಾರ್ಗಸೂಚಿ' ರೂಪಿಸಬೇಕು. ಉದಾಹರಣೆಗೆ, ಜೈವಿಕ ಇಂಧನ ಬಳಕೆಯಿಂದ ಹವಾಮಾನದಲ್ಲಿನ ಏರು-ಪೇರು ತಪ್ಪಿಸಬಹುದು. ಆದರೆ, ಇದೂ ಜೀವಿಗಳ ವಾಸಸ್ಥಾನದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಆಸ್ಟ್ರಿಯಾದ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಅಪ್ಲೈಡ್ ಸಿಸ್ಟಮ್ಸ್ ಅನಾಲಿಸಿಸ್‌ನ ನಿರ್ದೇಶಕರೊಬ್ಬರು ಹೇಳಿದ್ದಾರೆ.
ಕೇರಳ: 3 ಜಿಲ್ಲೆಗಳಿಗೆ ಬಿಸಿಗಾಳಿ ಎಚ್ಚರಿಕೆ
ತಿರುವನಂತಪುರಂ: ಕೇರಳದ ಕೊಲ್ಲಂ ತ್ರಿಶ್ಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಶನಿವಾರ ಎಚ್ಚರಿಕೆ ನೀಡಿದೆ.
ಈ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಏಪ್ರಿಲ್ 27 ಮತ್ತು 28ರಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಇಲಾಖೆ ತಿಳಿಸಿದೆ. ಈ ಮೂರೂ ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಅದರ ಆಧಾರದಂತೆ ಎಚ್ಚರಿಕೆ ನೀಡಲಾಗಿದೆ.
ಪಾಲಕ್ಕಾಡ್‌ನಲ್ಲಿ 41 ಡಿಗ್ರಿ ಸೆಲ್ಸಿಯಸ್ ಕೊಲ್ಲಂ ಮತ್ತು ತ್ರಿಶ್ಶೂರ್ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು ಎಂದು ಇಲಾಖೆ ಹೇಳಿದೆ.
ರಾಜಸ್ಥಾನದ ಕೆಲವೆಡೆ ಹಗುರ ಮಳೆ
ಜೈಪುರ: ರಾಜಸ್ಥಾನದ ಕೆಲ ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ ಗುಡುಗು ಸಹಿತ ಹಗುರ ಮಳೆ ಸುರಿದಿದೆ ಎಂದು ಸ್ಥಳೀಯ ಹವಾಮಾನ ಕೇಂದ್ರ ಶನಿವಾರ ತಿಳಿಸಿದೆ. ಛಕ್ಶು ಪುರಸಭೆ ಜೈಪುರದಲ್ಲಿ 21 ಮಿ.ಮೀ. ಮತ್ತು ಬಿಕಾನೇರ್‌ನ ದುಂಗರ್‌ಗಢದಲ್ಲಿ 4 ಮಿ.ಮೀ. ಮಳೆ ಸುರಿದಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಹಲವು ಪ್ರದೇಶಗಳಲ್ಲಿ ಮುಂದಿನ 5ರಿಂದ 6 ದಿನಗಳು ಶುಷ್ಕ ಹವಾಮಾನ ಮುಂದುವರೆಯಲಿದೆ. ಗಂಗಾನಗರ ಹನುಮಾನ್‌ಗಢ ಮತ್ತು ಸುತ್ತಲ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಇದೇ ಅವಧಿಯಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಅಥವಾ ಹಗುರ ಮಳೆ ಬರಲಿದೆ. ಗರಿಷ್ಠ ತಾಪಮಾನವು ಈ ಅವಧಿಯಲ್ಲಿ 2ರಿಂದ 3 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ.
ಒಡಿಶಾದಲ್ಲಿ ದಾಖಲೆಯ ತಾಪಮಾನ
ಭುವನೇಶ್ವರ: ಒಡಿಶಾದಾದ್ಯಂತ ಬಿಸಿಗಾಳಿ ಬೀಸುತ್ತಿದ್ದು ಭುವನೇಶ್ವರದಲ್ಲಿ ತಾಪಮಾನದ ಮಟ್ಟ ಶನಿವಾರ 44.6 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಈ ವರ್ಷದ ಬೇಸಿಗೆಯಲ್ಲಿ ತಾಪಮಾನವು 44 ಡಿಗ್ರಿ ಸೆಲ್ಸಿಯಸ್ ದಾಟಿರುವುದು ಇದೇ ಮೊದಲು ಎಂದು ಹವಾಮಾನ ವಿಜ್ಞಾನಿ ಉಮಾಶಂಕರ್ ದಾಸ್ ವರದಿಗಾರರಿಗೆ ತಿಳಿಸಿದರು.
ರಾಜ್ಯದ ಬಹುತೇಕ ಕಡೆಗಳಲ್ಲಿ ಭಾರಿ ಬಿಸಿಲು ಮತ್ತು ಆದ್ರತೆ ಹೆಚ್ಚಿರುವುದರಿಂದ ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ತಮ್ಮತಮ್ಮ ಮನೆಗಳಿಂದ ಹೊರಬರದಂತೆ ಜನರಿಗೆ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ತಾಪಮಾನ ದಾಖಲೆಯಲ್ಲಿ ಭುವನೇಶ್ವರದ ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಝಾರ್ಸುಗುಡಾ ಜಿಲ್ಲೆ (43.6 ಡಿಗ್ರಿ ಸೆಲ್ಸಿಯಸ್) ರೌರ್ಕೆಲಾ (42.5) ಚಾಂದ್‌ಬಾಲಿ (42.4) ಮತ್ತು ಸಂಬಲ್ಪುರ (42.1) ಜಿಲ್ಲೆಗಳಿವೆ. ಮುಂದಿನ 24 ಗಂಟೆಗಳಲ್ಲಿ ಒಡಿಶಾದ ಹಲವು ಸ್ಥಳಗಳಲ್ಲಿ ತಾಪಮಾನವು 2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗಲಿದೆ. ಆನಂತರ ಮುಂದಿನ 4ರಿಂದ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗಲಿದೆ ಎಂದು ಇಲಾಖೆ ಇಳಿಸಿದೆ.
ಇದೇ ವೇಳೆ ಮಯೂರ್‌ಭಂಜ್ ಜಾಜ್‌ಪುರ ಕೊಂಡುಝಾರ್ ಅಂಗುಲ್ ಡೆಂಕನಾಲ್ ಬೌಧ್ ಸುಂದರ್‌ಘರ್ ಝಾರ್ಸುಗುಡಾ ಖುರ್ದಾ ಮತ್ತು ಕಟಕ್ ಜಿಲ್ಲೆಗಳಲ್ಲಿ ಬಿಸಿಗಾಳಿಯಿಂದ ತೀವ್ರ ಬಿಸಿಗಾಳಿ ಇರಲಿದೆ ಎಂದು ಹವಾಮಾನ ಇಲಾಖೆಯು ರೆಡ್ ಅಲರ್ಟ್ (ಎಚ್ಚರಿಕೆಯಿಂದಿರಲು ಸೂಚನೆ) ನೀಡಿದೆ.