ಬೀಜಿಂಗ್ : 'ಭಾರತ ಮತ್ತು ಚೀನಾ ನಡುವಣ ಗಡಿಯಲ್ಲಿನ ಪರಿಸ್ಥಿತಿಯು ಬಹುತೇಕ ಸ್ಥಿರವಾಗಿದೆ. ಪೂರ್ವ ಲಡಾಖ್‌ನಲ್ಲಿ ಮೂಡಿರುವ ಅನಿಶ್ಚಿತತೆಯನ್ನು ಬಗೆಹರಿಸಲು ಉಭಯ ಕಡೆಗಳಿಂದಲೂ 'ಪರಿಣಾಮಕಾರಿ'ಯಾದ ಸಂವಹನವೂ ನಡೆದಿದೆ ಎಂದು ಚೀನಾದ ಸೇನೆ ಪ್ರತಿಕ್ರಿಯಿಸಿದೆ.
ನ್ಯೂಸ್‌ವೀಕ್ ನಿಯತಕಾಲಿಕಕ್ಕೆ ನೀಡಿದ್ದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ, ಚೀನಾ ಸೇನೆಯ ವಕ್ತಾರ ಹಿರಿಯ ಕರ್ನಲ್ ವು ಕ್ವಿಯಾನ್ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.
ರಾಜತಾಂತ್ರಿಕ ಮತ್ತು ಸೇನಾ ಹಂತದಲ್ಲಿ ಸಕಾರಾತ್ಮಕ ಮತ್ತು ರಚನಾತ್ಮಕವಾದ ದ್ವಿಪಕ್ಷೀಯ ಮಾತುಕತೆ ಮೂಲಕ ಈ ಅನಿಶ್ಚಿತತೆ ಬಗೆಹರಿಯುವ ವಿಶ್ವಾಸವಿದೆ ಎಂದು ಪ್ರಧಾನಿ ಹೇಳಿದ್ದರು.
'ಉಭಯ ದೇಶಗಳ ಗಡಿಯಲ್ಲಿ ಪ್ರಸ್ತುತ ಸ್ಥಿತಿ ಬಹುತೇಕ ಸ್ಥಿರವಾಗಿದೆ. ಅನಿಶ್ಚಿತತೆ ಬಗೆಹರಿಸಲು ಶೀಘ್ರವೇ ಪರಸ್ಪರ ಸ್ವೀಕಾರವಾದ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಬರಲಿವೆ' ಎಂದು ವು ಅವರು ಪ್ರತಿಕ್ರಿಯಿಸಿದರು.