ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಪ್ರತಿ ವಾರ ಇಬ್ಬರು ಸಚಿವರನ್ನು ಜೈಲಿಗೆ ಕರೆಸಿಕೊಂಡು ಆ ಇಲಾಖೆಯಲ್ಲಿನ ಬೆಳವಣಿಗೆಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಎಎಪಿಯ ರಾಜ್ಯಸಭೆ ಸದಸ್ಯ ಸಂದೀಪ್ ಪಾಠಕ್ ತಿಳಿಸಿದ್ದಾರೆ.
ತಿಹಾರ್ ಜೈಲಿನಲ್ಲಿರುವ ಅರವಿಂದ ಕೇಜ್ರಿವಾಲ್ ಅವರನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರೊಂದಿಗೆ ಸಂಸದ ಪಾಠಕ್ ಅವರೂ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದರು.
ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಯಲ್ಲಿ ಯಾವೆಲ್ಲಾ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂಬ ಬಗ್ಗೆ ತಿಳಿಯಲು ಸಚಿವರ ಜೊತೆ ಸಭೆ ನಡೆಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಮುಂದಿನ ವಾರದಿಂದ ಪ್ರತಿ ವಾರ ಇಬ್ಬರು ಸಚಿವರನ್ನು ಜೈಲಿಗೆ ಕರೆಸಿಕೊಂಡು ಆ ಇಲಾಖೆಯಲ್ಲಿ ನಡೆದ ಅಭಿವೃದ್ಧಿ ಬಗ್ಗೆ ಚರ್ಚಿಸಲಿದ್ದಾರೆ. ಜೊತೆಗೆ ಯಾವೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸಲಹೆ ಮತ್ತು ಸೂಚನೆಗಳನ್ನು ಮುಖ್ಯಮಂತ್ರಿಗಳು ನೀಡಲಿದ್ದಾರೆ' ಎಂದು ತಿಳಿಸಿದರು.
ಇದಕ್ಕೆ ಅಗತ್ಯವಿರುವ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುವುದು. ಈ ಮೂಲಕ ಸಮಂಜಸವಾದ ಮಾದರಿಯಲ್ಲಿ ಜೈಲಿನಿಂದಲೇ ಸರ್ಕಾರ ಕಾರ್ಯ ನಿರ್ವಹಿಸಲಿದೆ. ಶಾಸಕರು ಜನರ ಬಳಿಗೆ ತೆರಳಿ, ಅವರ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ಆಲಿಸಬೇಕು. ಜನರು ಎದುರಿಸುತ್ತಿರುವ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಶಾಸಕರು ಮುಂದಾಗಬೇಕು. ತಮ್ಮ ಅನುಪಸ್ಥಿತಿ ಜನರಿಗೆ ಕಾಡದಂತೆ ಶಾಸಕರು ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಕೇಜ್ರಿವಾಲ್ ಸೂಚಿಸಿದ್ದಾರೆ.