ಕಾಸರಗೋಡು: ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಚುನಾವಣಾ ಆಯೋಗದ ಜನರಲ್ ಒಬ್ಸರ್ವರ್ ಶಿರೇಂದ್ರ ಕುಮಾರ್ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅಭ್ಯರ್ಥಿಗಳಿಗೆ ಹಾಗೂ ಪ್ರಧಾನ ಕಾರ್ಯಕರ್ತರಿಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜತೆಗೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು. ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಕೆ.ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಅಭ್ಯರ್ಥಿಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಈ ರೀತಿಯ ಕಾರ್ಯಗಳು ಪುನರಾವರ್ತನೆಯಾಗದಂತೆ ರಾಜಕೀಯ ಪಕ್ಷಗಳು ನಿಗಾವಹಿಸಬೇಕು. ಪ್ರಚಾರ ವಾಹನಗಳಿಗೆ ಮತ್ತು ರಸ್ತೆಯಲ್ಲಿ ನಡೆಸುವ ಪ್ರದರ್ಶನಗಳಿಗೆ ಪೂರ್ವಾನುಮತಿ ಪಡೆದಿರಬೇಕು. ಮೆರವಣೆಗೆ ಮತ್ತು, ಪ್ರಚಾರ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಬಾರದು. ಆರಾಧನಾಲಯಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ಚುನಾವಣಾ ಪ್ರಚಾರ ವೇದಿಕೆಯನ್ನಾಗಿ ಬಳಸಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಚುನಾವಣಾ ವೆಚ್ಚವನ್ನು ನಿಖರವಾಗಿ ದಾಖಲಿಸಿ, ಸೂಕ್ತ ಲೆಕ್ಕಾಚಾರ ಸಕಾಲಕ್ಕೆ ಸಲ್ಲಿಸಬೇಕು. ಒಬ್ಬ ಅಭ್ಯರ್ಥಿಯು ಒಟ್ಟು 95 ಲಕ್ಷ ರೂ.ಗಳನ್ನು ಚುನಾವಣೆಗೆ ಖರ್ಚು ಮಾಡಬಹುದಾಗಿದ್ದು, ಈ ಖರ್ಚಿನ ಮಾಹಿತಿಯನ್ನು ನಿಖರವಾಗಿ ಸಲ್ಲಿಸಬೇಕು' ಎಂದು ಚುನಾವಣಾ ವೆಚ್ಚ ನಿರೀಕ್ಷಕರಾದ ಆನಂದ್ ರಾಜ್ ತಿಳಿಸಿದರು. ವೆಚ್ಚದ ನೋಡಲ್ ಅಧಿಕಾರಿ ವಿ.ಚಂದ್ರನ್ ತರಗತಿ ನಡೆಸಿದರು. ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ.ಕೈನಿಕರ, ಎಡಿಎಂ ಕೆ.ವಿ.ಶ್ರುತಿ, ಅಭ್ಯರ್ಥಿಗಳು ಹಾಗೂ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮ್ಮದ್ ಸ್ವಾಗತಿಸಿದರು. ಚುನಾವಣಾ ಅಪರ ಜಿಲ್ಲಾಧಿಕಾರಿ ಪಿ.ಅಖಿಲ್ ವಂದಿಸಿದರು.