ಇಂಫಾಲ: ಸಂಘರ್ಷ ಪೀಡಿತ ಮಣಿಪುರದಲ್ಲಿ ಶಾಂತಿ ಸ್ಥಾಪಿಸುವ ಮಾತುಕತೆಗಳು ರಾಜ್ಯದ ಪ್ರಾದೇಶಿಕ ಸಮಗ್ರತೆಗೆ ಯಾವುದೇ ರೀತಿಯಲ್ಲಿ ಧಕ್ಕೆ ಉಂಟಾಗಬಾರದು ಹಾಗೂ ಸ್ಥಳೀಯ ಜನರ ಹಿತರಕ್ಷಣೆಯೂ ಮುಖ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಬುಧವಾರ ಹೇಳಿದ್ದಾರೆ.
ಪಕ್ಷದ ಪ್ರಣಾಳಿಕೆ 'ಸಂಕಲ್ಪ ಪತ್ರ' ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಂತಿ ಮಾತುಕತೆಯು ಜನರ ಯೋಗಕ್ಷೇಮಕ್ಕೆ ಧಕ್ಕೆ ತರುವಂತಹ ವಿಷಯ ಹಾಗೂ ಮೂಲಭೂತ ಅಂಶಗಳನ್ನು ದುರ್ಬಲಗೊಳಿಸುವ ಪ್ರಸ್ತಾಪವನ್ನೂ ಒಪ್ಪುವುದಿಲ್ಲ ಎಂದಿದ್ದಾರೆ.
ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಔಪಚಾರಿಕ ಶಾಂತಿ ಮಾತುಕತೆಗಳು ನಡೆಯಲಿವೆ ಎನ್ನಲಾಗಿದೆ.
ಮಣಿಪುರದಲ್ಲಿ ಏಕತೆ ಕಾಪಾಡಲು ಬಿಜೆಪಿ ಬದ್ಧವಾಗಿದೆ ಹಾಗೂ ರಾಜ್ಯದಲ್ಲಿ ಜನಸಂಖ್ಯಾ ಸಮತೋಲವನ್ನು ಅಡ್ಡಿಪಡಿಸಲು ಅಕ್ರಮ ವಲಸಿಗರು ಶಾಂತಿ ಕದಡುವ ಪ್ರಯತ್ನಗಳು ನಡೆಸಿದ್ದರು. ಆದರೆ ಈ ವಿಷಯ ವಿರೋಧ ಪಕ್ಷಗಳಿಗೆ ಗೊತ್ತಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಉಲ್ಲೇಖಿಸಿ ಬಿರೇನ್ ಹೇಳಿದ್ದಾರೆ.
ರಾಜ್ಯದಲ್ಲಿ ಅಕ್ರಮ ವಲಸಿಗರನ್ನು ಗುರುತಿಸಲು ಸರ್ಕಾರ ರಚಿಸಿರುವ ಸಂಪುಟ ಉಪ ಸಮಿತಿಯ ಸದಸ್ಯರೂ ಆಗಿರುವ ಬಿಜೆಪಿಯ ಅಭ್ಯರ್ಥಿ ಬಸಂತಕುಮಾರ್ ಸಿಂಗ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲಾ ಭರವಸೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈಡೇರಿಸುತ್ತಾರೆ ಎಂದು ಬಿರೇನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.