ಕಣ್ಣೂರು: ಸಿಪಿಎಂನ ಹಿರಿಯ ಮುಖಂಡ ಇ.ಪಿ. ಜಯರಾಜನ್ ಅವರು ಬಿಜೆಪಿಗೆ ಸೇರಲು ಬಯಸಿದ್ದರು ಎಂಬ ಆರೋಪ ಕೇಳಿ ಬಂದ ಕಾರಣ, ಲೋಕಸಭಾ ಚುನಾವಣೆಯ ಮತದಾನ ದಿನದಂದು ಕೇರಳದ ಆಡಳಿತಾರೂಢ ಪಕ್ಷವು ತೀವ್ರ ಮುಜುಗರಕ್ಕೆ ಒಳಗಾಗಿತ್ತು ಎಂದು ಮೂಲಗಳು ತಿಳಿಸಿವೆ.
ಕಣ್ಣೂರು: ಸಿಪಿಎಂನ ಹಿರಿಯ ಮುಖಂಡ ಇ.ಪಿ. ಜಯರಾಜನ್ ಅವರು ಬಿಜೆಪಿಗೆ ಸೇರಲು ಬಯಸಿದ್ದರು ಎಂಬ ಆರೋಪ ಕೇಳಿ ಬಂದ ಕಾರಣ, ಲೋಕಸಭಾ ಚುನಾವಣೆಯ ಮತದಾನ ದಿನದಂದು ಕೇರಳದ ಆಡಳಿತಾರೂಢ ಪಕ್ಷವು ತೀವ್ರ ಮುಜುಗರಕ್ಕೆ ಒಳಗಾಗಿತ್ತು ಎಂದು ಮೂಲಗಳು ತಿಳಿಸಿವೆ.
ಜಯರಾಜನ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಪ್ರಯತ್ನ ನಡೆದಿತ್ತು ಎಂಬುದನ್ನು ಬಿಜೆಪಿ ನಾಯಕಿ ಶೋಭಾ ಸುರೇಂದ್ರನ್ ಅವರು ಎರಡು ದಿನಗಳ ಹಿಂದೆ ಬಹಿರಂಗಪಡಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, 'ಶಿವ ದೇವರು ಪಾಪಿಯ ಜೊತೆಗೆ ಸೇರಿದರೆ, ಶಿವನೂ ಪಾಪಿಯಾಗುತ್ತಾನೆ' ಎಂದು ಹೇಳಿದ್ದಾರೆ. ಜಯರಾಜನ್ ಅವರು ಸದ್ಯ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟದ ಸಂಚಾಲಕರಾಗಿದ್ದಾರೆ.
ಬಿಜೆಪಿ ಮತ್ತು ಜಯರಾಜನ್ ಅವರ ನಡುವೆ ಟಿ.ಜಿ. ನಂದಕುಮಾರ್ ಅವರು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದರು ಎಂದೂ ಆರೋಪಿಸಲಾಗಿತ್ತು.
'ನಮ್ಮ ದೇಶದ ಕೆಲವು ಜನರು ಪ್ರತಿದಿನ ಏಳುವಾಗಲೇ, ಯಾರಿಗೆ ಮೋಸ ಮಾಡಲಿ ಎಂದು ಆಲೋಚಿಸುತ್ತಿರುತ್ತಾರೆ' ಎಂದು ಪಿಣರಾಯಿ ಅವರು, ನಂದಕುಮಾರ್ ಹೆಸರು ಉಲ್ಲೇಖಿಸದೆ ಟೀಕಿಸಿದ್ದಾರೆ.
'ದಶಕಗಳ ರಾಜಕೀಯ ಪಯಣದಲ್ಲಿ ಜಯರಾಜನ್ ಅವರು ಹಲವಾರು ಅಡತಡೆಗಳನ್ನು ಎದುರಿಸಿದ್ದಾರೆ. ಈಗ ನಡೆಯುತ್ತಿರುವ ದಾಳಿ ಕೇವಲ ಅವರ ವಿರುದ್ಧವಲ್ಲ. ಸಿಪಿಎಂ ಮತ್ತು ಎಲ್‌ಡಿಎಫ್ ಅನ್ನೂ ಗುರಿಯಾಗಿಸಲಾಗಿದೆ' ಎಂದಿದ್ದಾರೆ. 'ಇಂತಹ ಅಪಪ್ರಚಾರಗಳನ್ನು ರಾಜ್ಯದ ಜನರು ನಂಬುವುದಿಲ್ಲ' ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಯರಾಜನ್ ಅವರು ಬಿಜೆಪಿ ಮುಖಂಡ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿಯಾಗಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಎಂ.ವಿ. ಗೋವಿಂದನ್, 'ಜನರು ಯಾರನ್ನಾದರೂ ಭೇಟಿಯಾಗಬಹುದು. ಈ ಕುರಿತು ವಿವಾದ ಮಾಡುತ್ತಿರುವುದರ ಹಿಂದೆ ರಾಜಕೀಯ ಷಡ್ಯಂತ್ರವಿದೆ' ಎಂದರು.