ಮುಂಬೈ: ಪುರುಷನ 'ಸಾಪೇಕ್ಷವಾದ ನಪುಂಸಕತ್ವ'ದ ಕಾರಣಕ್ಕೆ ಮದುವೆಯ ನಂತರ ಪ್ರಸ್ತ ಆಗಿಲ್ಲ ಎಂಬ ಆಧಾರದಲ್ಲಿ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ವಿವಾಹ ಸಂಬಂಧವೊಂದನ್ನು ಕೊನೆಗೊಳಿಸಿದೆ.
ನ್ಯಾಯಮೂರ್ತಿಗಳಾದ ವಿಭಾ ಕಂಕನವಾಡಿ ಮತ್ತು ಎಸ್.ಜಿ. ಚಪಲಗಾಂವಕರ್ ಅವರು ಇದ್ದ ವಿಭಾಗೀಯ ಪೀಠವು ಏಪ್ರಿಲ್ 15ರಂದು ಈ ಸಂಬಂಧ ಆದೇಶ ಹೊರಡಿಸಿದೆ.
ವಿವಾಹವನ್ನು ರದ್ದುಪಡಿಸುವಂತೆ ಕೋರಿ ಪತ್ನಿಯು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಕೌಟುಂಬಿಕ ನ್ಯಾಯಾಲಯವು ಫೆಬ್ರುವರಿಯಲ್ಲಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ 27 ವರ್ಷ ವಯಸ್ಸಿನ ಪತಿಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
'ಸಾಪೇಕ್ಷವಾದ ನಪುಂಸಕತ್ವವು' ಮಾಮೂಲಿ ನಪುಂಸಕತ್ವಕ್ಕಿಂತ ಭಿನ್ನ ಎಂದು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ. ವ್ಯಕ್ತಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಸಾಮರ್ಥ್ಯ ಇದ್ದರೂ, ನಿರ್ದಿಷ್ಟ ವ್ಯಕ್ತಿಯ ಜೊತೆ ಅಥವಾ ಸಂಗಾತಿಯ ಜೊತೆ ಮಾತ್ರ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಿಲ್ಲದಿರುವ ಸ್ಥಿತಿಯನ್ನು 'ಸಾಪೇಕ್ಷವಾದ ನಪುಂಸಕತ್ವ' ಎಂದು ಗುರುತಿಸಲಾಗುತ್ತದೆ.
ಹೀಗೆ ಆಗುವುದಕ್ಕೆ ಹಲವು ಬಗೆಯ ಮಾನಸಿಕ ಹಾಗೂ ದೈಹಿಕ ಕಾರಣಗಳು ಇದ್ದಿರಬಹುದು ಎಂದು ಪೀಠವು ಹೇಳಿದೆ. 'ಈ ಪ್ರಕರಣದಲ್ಲಿ ಪತಿಗೆ ತನ್ನ ಪತ್ನಿಯ ಜೊತೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿ ಮದುವೆಯ ನಂತರ ಪ್ರಸ್ತ ನಡೆದಿಲ್ಲ ಎಂದು ಅನ್ನಿಸುತ್ತದೆ' ಎಂದು ಪೀಠ ಹೇಳಿದೆ.
ಪ್ರಸ್ತ ಆಗದೆ ಇದ್ದುದಕ್ಕೆ ಪತಿಯು ಆರಂಭದಲ್ಲಿ ಪತ್ನಿಯನ್ನು ದೂಷಿಸಿರಬಹುದು, ತನಗೆ ಆಕೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಆತ ಹಿಂಜರಿದಿರಬಹುದು ಎಂದು ಪೀಠವು ಹೇಳಿದೆ.
'ಆದರೆ ನಂತರದಲ್ಲಿ, ಇದು ತನ್ನ ಮೇಲೆ ಜೀವನಪರ್ಯಂತ ಕಳಂಕವೊಂದನ್ನು ಹೊರಿಸುವುದಿಲ್ಲ ಎಂಬ ಕಾರಣಕ್ಕೆ ಅವರು ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡರು. ಸಾಪೇಕ್ಷವಾದ ನಪುಂಸಕತ್ವವು ಸಾಮಾನ್ಯ ನಪುಂಸಕತ್ವಕ್ಕಿಂತ ಭಿನ್ನವಾದುದು. ಸಾಪೇಕ್ಷವಾದ ನಪುಂಸಕತ್ವವನ್ನು ಒಪ್ಪಿಕೊಳ್ಳುವುದರಿಂದ, ಆ ವ್ಯಕ್ತಿಯು ಸಾಮಾನ್ಯ ಅರ್ಥದ ನಪುಂಸಕ ಎಂದಾಗುವುದಿಲ್ಲ' ಎಂದು ಪೀಠವು ವಿವರಿಸಿದೆ.
ಈ ಇಬ್ಬರು 2023ರ ಮಾರ್ಚ್‌ನಲ್ಲಿ ಮದುವೆಯಾಗಿದ್ದರು. ಮದುವೆಯಾದ 17 ದಿನಗಳ ನಂತರದಲ್ಲಿ ಅವರು ಬೇರೆಯಾಗಿದ್ದರು. ಮದುವೆಯ ನಂತರ ಪ್ರಸ್ತ ಆಗಿರಲಿಲ್ಲ ಎಂದು ದಂಪತಿ ಹೇಳಿದ್ದರು. ಪತಿಯು ತನ್ನೊಂದಿಗೆ ದೈಹಿಕ ಸಂಪರ್ಕಕ್ಕೆ ಒಪ್ಪುತ್ತಿಲ್ಲ ಎಂದು ಪತ್ನಿ ಹೇಳಿದ್ದರು.
ಕೌಟುಂಬಿಕ ನ್ಯಾಯಾಲಯಕ್ಕೆ ಆರಂಭದಲ್ಲಿ ಪ್ರಮಾಣಪತ್ರವೊಂದನ್ನು ಸಲ್ಲಿಸಿದ್ದ ಪತಿಯು, ಪ್ರಸ್ತ ಆಗಿಲ್ಲದಿರುವುದಕ್ಕೆ ಪತ್ನಿ ಕಾರಣ ಎಂದು ದೂರಿದ್ದರು. ಆದರೆ ನಂತರದಲ್ಲಿ, ಸಾಪೇಕ್ಷವಾದ ನಪುಂಸಕತ್ವವನ್ನು ಒಪ್ಪಿಕೊಂಡು ಲಿಖಿತ ಹೇಳಿಕೆ ಸಲ್ಲಿಸಿದರು.