ಬದಿಯಡ್ಕ: ದೀನದಲಿತರ ನಾಯಕ ಸಂವಿಧಾನ ತಜ್ಞ, ಡಾ ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳು ಸಾರ್ವಕಾಲಿಕ ಮೌಲ್ಯದ್ದು ಎಂಬುದಾಗಿ ನಿವೃತ್ತ ಜಿಲ್ಲಾ ಸಮೂಹ ಮಾಧ್ಯಮ ಶಿಕ್ಷಣಾಧಿಕಾರಿ ರಾಮಚಂದ್ರ ಮಾರ್ಪನಡ್ಕ ಅಭಿಪ್ರಾಯಪಟ್ಟರು.
ಅಂಬೇಡ್ಕರ್ ವಿಚಾರವೇದಿಕೆಯ ಆಶ್ರಯದಲ್ಲಿ ಬಾರಡ್ಕದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಶೋಷಿತ ವರ್ಗದ ಅಭ್ಯುದಯಕ್ಕಾಗಿ ಜನ್ಮತಾಳಿದರು. ಜೀವನದಲ್ಲಿ ಕಷ್ಟನಷ್ಟ ಸಹಿಸಿ ಸ್ವಪರಿಶ್ರಮದಿಂದ ವಿದ್ಯಾವಂತರಾಗಿ ವಿಶ್ವಮಾನ್ಯರಾದವರು. ದಲಿತರ ಮತ್ತು ದೇಶದ ಅಭಿವೃದ್ಧಿಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟವರು. ಅವರ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ತುರ್ತಾಗಿ ನಡೆಯಬೇಕಿದೆ ಎಂದು ಅವರು ತಿಳಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಹಾರಾರ್ಪಣೆಗೈದರು.
ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮಪಂಚಾಯಿತಿ ಮಾಜಿ ಸ್ಥಾಯಿಸಮಿತಿ ಅಧ್ಯಕ್ಷ ಗಂಗಾಧರ ಗೋಳಿಯಡ್ಕ, ಪ್ರಗತಿ ವಿದ್ಯಾಲಯದ ನಿರ್ದೇಶಕ ಉದಯ ಕುಮಾರ್ ಮುಂಡೋಡು, ಕವಯಿತ್ರಿ ಪದ್ಮಾವತಿ ಏದಾರ್, ಧಾರ್ಮಿಕ ಮುಖಂಡ ಶಂಕರ ಸ್ವಾಮಿಕೃಪಾ, ಸುಪ್ರಿಯಾ ಟೀಚರ್, ಸುಮಿತ್ರಾ ಎರ್ಪಕಟ್ಟೆ, ವಸಂತ ಬಾರಡ್ಕ ಮಾತನಾಡಿದರು. ಅಂಬೇಡ್ಕರ್ ವಿಚಾರವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜಯಕುಮಾರ್ ಬಾರಡ್ಕ ಸ್ವಾಗತಿಸಿ, ಸುಂದರ ಬಾರಡ್ಕ ವಂದಿಸಿದರು. ರಾಮಪಟ್ಟಾಜೆ ನಿರೂಪಿಸಿದರು.