ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುವ ಎ.26ರಂದೇ ಕೇರಳ ರಾಜ್ಯದ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ದ.ಕ. ಲೋಕಸಭಾ ಕ್ಷೇತ್ರದ ಅರ್ಹ ಮತದಾರರಾಗಿರುವ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೇರಳ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದಲ್ಲಿ ಅವರಿಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಲು 'ವಿ ವೋ ಇ ಡಿ' (ವೋಟರ್ ಆನ್ ಇಲೆಕ್ಷನ್ ಡ್ಯೂಟಿ) ಯಡಿ ಈ ಅವಕಾಶ ಕಲ್ಪಿಸಲಾಗಿದೆ.
ಈ ಅಂಚೆ ಮತದಾನ ಪ್ರಕ್ರಿಯೆ ಎ.24ರವರೆಗೆ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೂ ಲಭ್ಯವಿರುತ್ತದೆ. ಇದೇ ರೀತಿಯ ಸವಲತ್ತನ್ನು ದ.ಕ. ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿರುವ ಕೇರಳ ರಾಜ್ಯದ 'ವಿ ವೋ ಇ ಡಿ' ವೋಟರ್ಸ್ ಗಳಿಗೂ ಕಲ್ಪಿಸಲಾಗಿದ್ದು, ಈ ಬಗ್ಗೆ ಅಲ್ಲಿನ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಕೇರಳ ರಾಜ್ಯದ 'ವಿವೋಇಡಿ' ಮತದಾರರು ಅಂಚೆ ಮತದಾನ ಮಾಡಲು ಸಂಬಂಧಿಸಿದ ಸಕ್ಷಮ ವ್ಯಾಪ್ತಿಯ ಜಿಲ್ಲಾ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ದ.ಕ. ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಮುಲ್ಲೈ ಮುಗಿಲನ್ ಎಂ.ಪಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.