ನವದೆಹಲಿ: ರಾಜಸ್ಥಾನದ ಬನ್ಸ್ವಾರಾದಲ್ಲಿ ಭಾನುವಾರ ನಡೆದ ಚುನಾವಣಾ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವುದು ಚುನಾವಣಾ ವಿವಾದವಾಗಿ ಮಾರ್ಪಟ್ಟಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್(ಸಿಪಿಎಂ) ಈಗ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಚುನಾವಣಾ ಆಯೋಗ(ಇಸಿಐ) ಪ್ರಧಾನಿ ಮೋದಿ ವಿರುದ್ಧ 'ಕಠಿಣ ಕ್ರಮ' ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ.
ಸಿಪಿಎಂ ಮೂಲಗಳ ಪ್ರಕಾರ, ಚುನಾವಣಾ ನೀತಿ ಸಂಹಿತೆ(ಎಂಸಿಸಿ) ಉಲ್ಲಂಘಿಸಿದ ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಿ 'ಭಾರತದ ಕಾಳಜಿಯುಳ್ಳ ನಾಗರಿಕರು' ಆನ್‌ಲೈನ್ ಅರ್ಜಿ ಅಭಿಯಾನ ಆರಂಭಿಸಿದ್ದಾರೆ.
ಆಯೋಗದ ಮೌನವನ್ನು ಪ್ರಶ್ನಿಸಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಪ್ರಧಾನಿ ಮೋದಿಯ ಈ ಹೇಳಿಕೆ ಅತ್ಯಂತ ಅಮಾನುಷವಾಗಿದೆ ಎಂದು ಸೋಮವಾರ ಕಿಡಿ ಕಾರಿದ್ದಾರೆ.
"ಇದು ಅತ್ಯಂತ ಘೋರ! ಚುನಾವಣಾ ಆಯೋಗದ ಮೌನ ಮತ್ತಷ್ಟು ಕ್ರೂರವಾಗಿದೆ! ಮೋದಿಯವರ ದ್ವೇಷ ಭಾಷಣವು ಚುನಾವಣಾ ನೀತಿ ಸಂಹಿತೆ ಮತ್ತು ದ್ವೇಷ ಭಾಷಣದ ಕುರಿತು ಸುಪ್ರೀಂ ಕೋರ್ಟ್ ಆದೇಶಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಇದು ಕಠಿಣ ಕ್ರಮ ಮತ್ತು ನ್ಯಾಯಾಲಯದ ನಿಂದನೆಗೆ ಅರ್ಹವಾಗಿದೆ," ಎಂದು ಸೀತಾರಂ ಯೆಚೂರಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಿನ್ನೆ ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಜನರು ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು "ಒಳನುಸುಳುಕೋರರು" ಮತ್ತು "ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ" ನೀಡಲು ಕಾಂಗ್ರೆಸ್ ಯೋಜಿಸಿದೆ ಎಂದು ಆರೋಪಿಸಿದ್ದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ದೇಶದ ಸಂಪತ್ತನ್ನು ಮರುಹಂಚಿಕೆ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ ಪ್ರಧಾನಿ ಮೋದಿ ಆರೋಪಿಸಿದ್ದರು.