ನವದೆಹಲಿ: ಪನಾಮ ಧ್ವಜದೊಂದಿಗೆ ಕಚ್ಚಾ ತೈಲ ಹೊತ್ತು ಸಾಗುತ್ತಿದ್ದ ಸರಕು ಸಾಗಣೆ ಹಡಗಿನ ಮೇಲೆ ಹೌತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದು, ಭಾರತೀಯ ನೌಕಾಪಡೆಯು ತ್ವರಿತವಾಗಿ ಆ ಹಡಗಿನ ನೆರವಿಗೆ ಧಾವಿಸಿ ಅದರಲ್ಲಿದ್ದ 22 ಭಾರತೀಯರೂ ಸೇರಿದಂತೆ 33 ಸಿಬ್ಬಂದಿಯನ್ನು ರಕ್ಷಿಸಿದೆ.

ಎಂ.ವಿ ಆಂಡ್ರೊಮೆಡಾ ಸ್ಟಾರ್ ಹಡಗಿನ ಮೇಲೆ ಏಪ್ರಿಲ್ 26ರಂದು ದಾಳಿ ನಡೆದಿತ್ತು. ವಿಷಯ ಗೊತ್ತಾದ ಕೂಡಲೇ ಭಾರತೀಯ ನೌಕಾಪಡೆಯ ಐಎನ್‌ಎಸ್ ಕೊಚ್ಚಿ ಸಮರ ನೌಕೆಯು ತ್ವರಿತವಾಗಿ ಸ್ಪಂದಿಸಿತು. ಇದರ ಪರಿಣಾಮ ಆ ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಸರಕು ಸಾಗಣೆ ಹಡಗುಗಳನ್ನು ಗುರಿಯಾಗಿಸಿ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಮೂರು ಕ್ಷಿಪಣಿಗಳನ್ನು ಉಡಾವಣೆ ಮಾಡಿದ್ದರು. ಈ ದಾಳಿಯಿಂದ ಎಂ.ವಿ ಆಂಡ್ರೊಮೆಡಾ ಸ್ಟಾರ್ ಹಡಗಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಕೂಡಲೇ ಅಲ್ಲಿಗೆ ಹೋದ ಐಎನ್‌ಎಸ್ ಕೊಚ್ಚಿ ರಕ್ಷಣಾ ಕಾರ್ಯದಲ್ಲಿ ನಿರತವಾಯಿತು. ಹೆಲಿಕಾಪ್ಟರ್ ಕಾರ್ಯಾಚರಣೆಯನ್ನೂ ಕೈಗೊಂಡು ಹಡಗಿನಲ್ಲಿದ್ದವರನ್ನು ರಕ್ಷಿಸಲಾಯಿತು ಎಂದು ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.