ನವದೆಹಲಿ: ಭಾರತೀಯ ಜನತಾ ಪಕ್ಷ ಇಂದು ದೇಶದ ಆದ್ಯತೆಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಪಕ್ಷದ 44 ನೇ ಸಂಸ್ಥಾಪನಾ ದಿನದ ಅಂಗವಾಗಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ನಮ್ಮ ಪಕ್ಷ ದೇಶದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆದಿದ್ದು ಜನತೆ ಕೇಂದ್ರದಲ್ಲಿ ಇನ್ನೊಂದು ಅವಧಿಗೂ ನಮ್ಮ ಸರ್ಕಾರವನ್ನೇ ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಅಡಿಪಾಯ ಹಾಕಲಾಗಿದ್ದು ಈ ಬಾರಿ ಆಯ್ಕೆಯಾದಾಗ ಉತ್ತಮವಾದುದ್ದನ್ನು ನಿರ್ಮಿಸುವುದಾಗಿ ಪ್ರಧಾನಿ ಈ ವೇಳೆ ತಿಳಿಸಿದ್ದಾರೆ.
ಭಾರತದ ಯುವ ಜನತೆ ತಮ್ಮ ಆಶೋತ್ತರಗಳನ್ನು ಈಡೇರಿಸುವ, 21 ನೇ ಶತಮಾನದಲ್ಲಿ ದೇಶಕ್ಕೆ ನಾಯಕತ್ವವನ್ನು ನೀಡುವ ಪಕ್ಷವನ್ನಾಗಿ ಬಿಜೆಪಿಯನ್ನು ನೋಡುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ದೇಶವನ್ನು ದೀರ್ಘಾವಧಿ ಆಳಿದ್ದ ಭ್ರಷ್ಟಾಚಾರ, ಕುತಂತ್ರ, ಜಾತೀಯತೆ, ಕೋಮುವಾದ ಮತ್ತು ವೋಟ್ ಬ್ಯಾಂಕ್ ರಾಜಕಾರಣದ ಸಂಸ್ಕೃತಿಯಿಂದ ಭಾರತವನ್ನು ಬಿಜೆಪಿ ಮುಕ್ತಗೊಳಿಸಿದೆ ಎಂದು ಪ್ರಧಾನಿ ಮೋದಿ ಇದೇ ವೇಳೆ ಪ್ರತಿಪಾದಿಸಿದರು.