ಕಾಸರಗೋಡು: ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯದ ಆದೇಶ ಪಡೆದ ಎಲ್ಲಾ ಅಧಿಕಾರಿಗಳು ಏ. 18ರಿಂದ 20ರ ವರೆಗೆ ನಡೆಯಲಿರುವ ತರಬೇತಿಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಇನ್ಬಾಶೇಖರ್ ತಿಳಿಸಿದ್ದಾರೆ.
ತರಬೇತಿ ಆದೇಶ ಪಡೆದವರಿಗೆ ಯಾವುದೇಮಾತ್ರಕ್ಕೂ ಕರ್ತವ್ಯದಿಂದ ವಿನಾಯಿತಿ ನೀಡಲಾಗದು. ನೇಮಕಾತಿ ಆದೇಶದಲ್ಲಿ ನಮೂದಿಸಿರುವ ಕೇಂದ್ರಗಳಲ್ಲಿ ತರಬೇತಿ ನೀಡಲಾಗುವುದು. ಈ ದಿನಾಂಕದಂದು ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಲು ಅರ್ಹರಾಗಿರುವ ಚುನಾವಣಾ ಕರ್ತವ್ಯದಲ್ಲಿರುವ ನೌಕರರಿಗೆ ಚುನಾವಣಾ ಕರ್ತವ್ಯದ ಪ್ರಮಾಣಪತ್ರ ವಿತರಿಸಲಾಗುವುದು. ಇದರೊಂದಿಗೆ, ಡ್ಯೂಟಿ ಬೂತ್‍ನಲ್ಲಿಯೇ ತಮ್ಮ ಹಕ್ಕು ಚಲಾಯಿಸಬಹುದಾಗಿದೆ.
ಅಂಚೆ ಮತಪತ್ರಕ್ಕೆ ಅರ್ಹರಾದವರು ತರಬೇತಿ ಕೇಂದ್ರದಲ್ಲಿ ಸ್ಥಾಪಿಸಲಾದ ಮತದಾರರ ಅನುಕೂಲ ಕೇಂದ್ರದಲ್ಲಿ ಮತ ಚಲಾಯಿಸಲು ಅನುಕೂಲ ಮಾಡಿಕೊಡಲಾಗುವುದು. ಕಾಸರಗೋಡು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಮತ ದಾಖಲಿಸಿರುವ ಮತಪತ್ರವನ್ನು ನೇರವಾಗಿ ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದೂ ಜಿಲ್ಲಾಧಿಕಾರಿ ತಿಳಿಸಿದರು.
15ರಂದು ಅಂಚೆ ಮತಯಂತ್ರ ತರಬೇತಿ:
ಪೆÇೀಸ್ಟಲ್ ಬ್ಯಾಲೆಟ್ ತಂಡಕ್ಕೆ ಏಪ್ರಿಲ್ 15 ರಂದು ಬೆಳಿಗ್ಗೆ 10ಕ್ಕೆ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ತರಬೇತಿ ಆಯೋಜಿಸಲಾಗಿದೆ. ಕಲ್ಯಾಶ್ಯೇರಿ, ಪಯ್ಯನ್ನೂರು, ತ್ರಿಕರಿಪುರ, ಕಾಞಂಗಾಡ್, ಉದುಮ, ಕಾಸರಗೋಡು, ಮಂಜೇಶ್ವರ ಕ್ಷೇತ್ರವಾರು ಅಂಚೆ ಮತಪತ್ರದ ಉಸ್ತುವಾರಿ ನೌಕರರು ತರಬೇತಿಗೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.