ಪತ್ತನಂತಿಟ್ಟ: 2019ರಲ್ಲಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ಸೋತ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮತ್ತೆ ಅಲ್ಲಿಂದ ಸ್ಪರ್ಧಿಸುವ ಧೈರ್ಯವಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.
ಅಮೇಥಿಯಲ್ಲಿ ಸೋಲು ಅನುಭವಿಸಿದ ನಂತರ ರಾಹುಲ್ ಗಾಂಧಿ ಉತ್ತರ ಪ್ರದೇಶದಿಂದ ಕೇರಳಕ್ಕೆ ವಲಸೆ ಬಂದರು ಎಂದು ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದರು.
ಇಂದು ಪತ್ತನಂತಿಟ್ಟ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಕೆ ಆಂಟನಿ ಅವರ ಪರ ಪ್ರಚಾರ ನಡೆಸಿದ ರಾಜನಾಥ್ ಸಿಂಗ್ ಅವರು, ಈ ಬಾರಿ ವಯನಾಡಿನ ಜನ ರಾಹುಲ್ ಗಾಂಧಿಯನ್ನು ತಮ್ಮ ಸಂಸದರನ್ನಾಗಿ ಆಯ್ಕೆ ಮಾಡದಿರಲು ನಿರ್ಧರಿಸಿದ್ದಾರೆ ಎಂದರು.
ದೇಶದಲ್ಲಿ ವಿವಿಧ ಬಾಹ್ಯಾಕಾಶ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಲಾಂಚ್ ಮಾಡುತ್ತಿರುವಾಗ, "ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಯುವ ನಾಯಕನನ್ನು ಲಾಂಚ್ ಮಾಡಲು ಸಾಧ್ಯವಾಗುತ್ತಿಲ್ಲ" ಎಂದು ರಾಜನಾಥ್ ಸಿಂಗ್ ವ್ಯಂಗ್ಯವಾಡಿದರು.
"ಕಾಂಗ್ರೆಸ್ ಪಕ್ಷದ 'ರಾಹುಲ್ ಯಾನ' ಇನ್ನೂ ಲಾಂಚ್ ಆಗಿಲ್ಲ ಅಥವಾ ಎಲ್ಲಿಯೂ ಲ್ಯಾಂಡ್ ಸಹ ಆಗಿಲ್ಲ" ಎಂದು ವಯನಾಡ್ ಕಾಂಗ್ರೆಸ್ ಸಂಸದರ ವಿರುದ್ಧ ರಕ್ಷಣಾ ಸಚಿವರು ವಾಗ್ದಾಳಿ ನಡೆಸಿದರು.
ತಮ್ಮ ಭಾಷಣದಲ್ಲಿ, ಕಾಂಗ್ರೆಸ್ ಹಿರಿಯ ನಾಯಕ ಎ ಕೆ ಆಂಟನಿ ಅವರನ್ನು ಹೊಗಳಿದ ರಾಜನಾಥ್ ಸಿಂಗ್, ಅವರು ಒಬ್ಬ ಶಿಸ್ತುಬದ್ಧ ಮತ್ತು ತತ್ವಬದ್ಧ ವ್ಯಕ್ತಿ ಎಂದು ಕರೆದರು. ಆದರೆ ಲೋಕಸಭೆ ಚುನಾವಣೆಯಲ್ಲಿ ಅನಿಲ್ ಆಂಟೋನಿ ಸೋಲಬೇಕು ಎಂಬ ಆ್ಯಂಟನಿ ಹೇಳಿಕೆ ಓದಿ ಆಶ್ಚರ್ಯವಾಯಿತು ಎಂದರು.