ತ್ರಿಶೂರ್ : ಮುಂಬರುವ ಲೋಕಸಭೆ ಚುನಾವಣೆ ನಂತರ ಸಂಸತ್ತಿನಲ್ಲಿ ಕೇರಳ ರಾಜ್ಯದ ಧ್ವನಿ ಸಂಸತ್ತಿನಲ್ಲಿ ಕೇಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಕೇರಳಿಗರಿಗೆ ಭರವಸೆ ನೀಡಿದ್ದಾರೆ.
ಇಂದು ಕೇರಳದ ತ್ರಿಶೂರ್ ನಲ್ಲಿ ಚುನಾವಣಾ ಪ್ರಚಾರ ಕೈಗೊಂಡು, ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು, ಕೇರಳದಲ್ಲಿ ಇದು ಪ್ರಗತಿಯ ವರ್ಷವಾಗಲಿದೆ ಎಂದು ಹೇಳಿದರು. ಬಿಜೆಪಿಯ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾದ 'ಮೋದಿ ಕಿ ಗ್ಯಾರಂಟಿ' ಎಂಬ ವಿವಿಧ ಭರವಸೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
ಎನ್‌ಡಿಎ ಮೈತ್ರಿ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಅಹಮದಾಬಾದ್ ಮತ್ತು ಮುಂಬೈ ನಡುವಿನ ಬುಲೆಟ್ ಟ್ರೈನ್‌ನಂತೆ ಉತ್ತರ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಬುಲೆಟ್ ರೈಲು ಸೇವೆ ಆರಂಭಕ್ಕೆ ಸಮೀಕ್ಷೆ ಕಾರ್ಯವನ್ನು ಪ್ರಾರಂಭಿಸಲಾಗುವುದು ಎಂದರು.
ವಿಶ್ವದಲ್ಲಿ ಭಾರತದ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಕಾಂಗ್ರೆಸ್ ಸೃಷ್ಟಿಸುತ್ತಿದ್ದರೆ, ಬಿಜೆಪಿ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿ ನಿರ್ಮಿಸಿದೆ ಎಂದರು. ಕಳೆದ 10 ವರ್ಷಗಳ ಎನ್‌ಡಿಎ ಆಡಳಿತದಲ್ಲಿ ದೇಶದಲ್ಲಿ ಏನಾಯಿತು ಎಂಬುದು ಕೇವಲ ಟ್ರೇಲರ್ ಆಗಿದ್ದು, ಕೇರಳ ರಾಜ್ಯ ಸೇರಿದಂತೆ ಒಟ್ಟಾರೆಯಾಗಿ ಭಾರತಕ್ಕೆ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ ಎಂದರು.
ದಕ್ಷಿಣ ರಾಜ್ಯದಲ್ಲಿ ಕೇಂದ್ರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಎಡ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ ಪ್ರಧಾನಿ, ಎಡರಂಗವು ಈ ಹಿಂದೆ ಅಧಿಕಾರದಲ್ಲಿದ್ದ ಇತರ ರಾಜ್ಯಗಳಲ್ಲಿ ಮಾಡಿದಂತೆ ಕೇರಳವನ್ನು ಹಾಳುಮಾಡುತ್ತದೆ ಎಂದರು.
ಕರುವನ್ನೂರ್ ಸಹಕಾರಿ ಬ್ಯಾಂಕ್ ಹಗರಣವನ್ನು ಉಲ್ಲೇಖಿಸಿ ಎಡಪಕ್ಷಗಳು ಬಡವರ ಹಣವನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ ಮೋದಿ ಅವರು ರಾಜ್ಯದಲ್ಲಿ ಸಿಪಿಐ(ಎಂ) ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಇಲ್ಲಿಂದ ಅವರು ಕುನ್ನಂಕುಲಂನಲ್ಲಿ ಸಾರ್ವಜನಿಕ ಸಭೆಯ ನಂತರ ತಿರುವನಂತಪುರಂ ಜಿಲ್ಲೆಯ ಕಟ್ಟಕ್ಕಡದಲ್ಲಿ ಮತ್ತೊಂದು ಸಭೆ ನಡೆಸಿದರು. ಕೇರಳ ರಾಜ್ಯಕ್ಕೆ ಪ್ರಧಾನಿಯವರ ಆರನೇ ಸಲದ ಭೇಟಿ ಇದಾಗಿದೆ.
ಮಾರ್ಚ್ 19 ರಂದು ಪಾಲಕ್ಕಾಡ್ ಜಿಲ್ಲೆಯಲ್ಲಿ ಬೃಹತ್ ರೋಡ್ ಶೋ ನಡೆಸಲು ಕೇರಳಕ್ಕೆ ಬಂದಿದ್ದರು. ಅದಕ್ಕೂ ಮುನ್ನ ಜನವರಿಯಲ್ಲಿ ಎರಡು ಬಾರಿ ಹಾಗೂ ಫೆಬ್ರವರಿಯಲ್ಲಿ ಒಮ್ಮೆ ರಾಜ್ಯಕ್ಕೆ ಭೇಟಿ ನೀಡಿದ್ದರು. ಈ ಭೇಟಿಗಳು ಅಧಿಕೃತ ಮತ್ತು ಪಕ್ಷದ ಕಾರ್ಯಗಳನ್ನು ಒಳಗೊಂಡಿತ್ತು.
ಕೇರಳದಲ್ಲಿ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 26 ರಂದು ಎಲ್ಲಾ 20 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.