ಕೋಝಿಕ್ಕೋಡ್: ಸೋಮವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆಪ್ ಸರಕಾರದ ವಿರುದ್ಧ ಕಾಂಗ್ರೆಸ್ ತೆಗೆದುಕೊಂಡ ಕ್ರಮದಿಂದಾಗಿ ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆಗೆ ದಾರಿಯಾಯಿತು ಎಂದು ಟೀಕಿಸಿದರು.
ನಿನ್ನೆಯಷ್ಟೆ ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಇಂಡಿಯಾ ಮೈತ್ರಿಕೂಟದ ಸಮಾವೇಶದಲ್ಲಿ ಭಾರಿ ಜನಸ್ತೋಮ ಭಾಗವಹಿಸಿರುವುದು ಬಿಜೆಪಿಗೆ ಪ್ರಬಲವಾದ ಎಚ್ಚರಿಕೆಯಾಗಿದೆ ಎಂದೂ ಅವರು ಅಭಿಪ್ರಾಯಪಟ್ಟರು.
ಇತ್ತೀಚೆಗಷ್ಟೆ ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆಪ್ ಮುಖ್ಯಸ್ಥ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿತ್ತು.
ಕೇಜ್ರಿವಾಲ್ ಬಂಧನವನ್ನು ವಿರೋಧಿಸಿ ಹೊಸ ದಿಲ್ಲಿಯಲ್ಲಿ 18 ಬಿಜೆಪಿಯೇತರ ಪಕ್ಷಗಳು ಒಟ್ಟಾಗಿ ಸೇರಿದ ಮರುದಿನ ಈ ಕುರಿತು ಪ್ರತಿಕ್ರಿಯಿಸಿರುವ ಪಿಣರಾಯಿ ವಿಜಯನ್, ಕಾಂಗ್ರೆಸ್ ಈ ಸಮಾವೇಶದಿಂದ ಪಾಠ ಕಲಿಯಬೇಕು ಎಂದು ಕಿವಿಮಾತು ಹೇಳಿದರು.
ದೇಶಾದ್ಯಂತ ಇರುವ ಕಾಂಗ್ರಸ್ಸೇತರ ಪಕ್ಷಗಳ ವಿರುದ್ಧ ದಾಳಿ ನಡೆಸುವುದಕ್ಕೂ ಮುನ್ನ ಕಾಂಗ್ರೆಸ್ ಪಕ್ಷವು ಆತ್ಮಾವಲೋಕ ಮಾಡಿಕೊಳ್ಳಬೇಕು ಎಂದೂ ಅವರು ಕರೆ ನೀಡಿದರು.
ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಬಂಧನವಾದಾಗ, ಅರವಿಂದ್ ಕೇಜ್ರಿವಾಲ್ ರ ಬಂಧನಕ್ಕೂ ಆಗ್ರಹಿಸಿದ್ದು ಕಾಂಗ್ರೆಸ್ ಎಂದು ಅವರು ಇದೇ ಸಂದರ್ಭದಲ್ಲಿ ನೆನಪಿಸಿದರು. ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ತನಿಖೆ ನಡೆಯಬೇಕು ಎಂದು ದೂರು ದಾಖಲಿಸಿದ್ದು ಕಾಂಗ್ರೆಸ್ ಎಂದು ಅವರು ಆರೋಪಿಸಿದರು.
ಹೀಗಿದ್ದೂ, ದೇಶಾದ್ಯಂತ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡಿರುವ ಬಿಜೆಪಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ರವಿವಾರ ನಡೆದ ಸಮಾವೇಶದಲ್ಲಿ ಭಾಗವಹಿಸಿದ ಕಾಂಗ್ರೆಸ್ ನಡೆಯನ್ನು ಅವರು ಸ್ವಾಗತಿಸಿದರು.