ಕಾಸರಗೋಡು:ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಅವರ ಚುನಾವಣಾ ಪ್ರಚಾರಾರ್ಥ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಏ. 17ರಂದು ಕಾಸರಗೋಡಿಗೆ ಭೇಟಿ ನೀಡಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು.
ಬೆಳಗ್ಗೆ 10ಕ್ಕೆ ಕಾಸರಗೊಡು ತಾಳಿಪಡ್ಪು ಮೈದಾನದಲ್ಲಿ ವಿಶೇಷವಾಗಿ ಸಜ್ಜುಗೊಳಿಸಲಾದ ಬೃಹತ್ ಸಭಾಂಗಣದಲ್ಲಿ ಭಾಷಣ ಮಾಡುವರು. ಕೇಂದ್ರ ಸಚಿವರ ಭೇಟಿ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಾಸರಗೋಡು ಅಲ್ಲದೆ ಕಣ್ಣೂರು, ವಯನಾಡು ಜಿಲ್ಲೆಗಳಿಂದಲೂ ಹೆಚ್ಚಿನ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಬಿಜೆಪಿಯ ಐದು ಮಂದಿ ಸ್ಟಾರ್ ಪ್ರಚಾರಕರಲ್ಲಿ ರಾಜನಾಥ್ ಸಿಂಗ್ ಒಬ್ಬರಾಗಿದ್ದಾರೆ. ಗೃಹಸಚಿವರ ಭೇಟಿ ಹಿನ್ನೆಲೆಯಲ್ಲಿ ಎಸ್‍ಪಿಜಿ ಕಮಾಂಡೋ ಪಡೆಗಳೂ ಕಾಸರಗೋಡಿಗೆ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಕಾರ್ಯಕ್ರಮದಲ್ಲಿ ಎನ್‍ಡಿಎ ಕೇರಳ ರಾಜ್ಯ, ಕಾಸರಗೋಡು ಜಿಲ್ಲಾ ಮುಖಂಡರು ಪಾಳ್ಗೊಳ್ಳುವರು.