ನವದೆಹಲಿ: ಇವಿಎಂ ಗಳಲ್ಲಿ ಮತ ಚಲಾಯಿಸಿದ್ದನ್ನು ವಿವಿಪ್ಯಾಟ್ ವ್ಯವಸ್ಥೆಯಿಂದ ಉತ್ಪಾದನೆಗೊಂಡ ಕಾಗದದೊಂದಿಗೆ ಪರಿಶೀಲಿಸಬೇಕೆಂಬ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಗೌಪ್ಯ ಬ್ಯಾಲೆಟ್ ಮತನಾದ ವಿಧಾನದಿಂದಾಗುವ ಋಣಾತ್ಮಕ ಪರಿಣಾಮಗಳ ಬಗ್ಗೆ ತನಗೆ ತಿಳಿದಿದೆ ಎಂದು ಹೇಳಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ, ನಾವು 60 ನೇ ವಯಸ್ಸಿನಲ್ಲಿದ್ದೇವೆ. ಬ್ಯಾಲೆಟ್ ಪೇಪರ್ ಗಳಿರುವಾಗ ಏನೆಲ್ಲಾ ಆಯಿತು ಎಂಬುದು ನಮಗೆ ತಿಳಿದಿದೆ. ನೀವು ಅದನ್ನು ಮರೆತಿರಬಹುದು ಆದರೆ ನಾವು ಅದನ್ನು ಮರೆತಿಲ್ಲ ಎಂದು ಅರ್ಜಿದಾರರ ಪರ ವಕೀಲರಿಗೆ ಹೇಳಿದ್ದಾರೆ.
ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಸಲ್ಲಿಸಿದ್ದ ಅರ್ಜಿ ಪರ ವಾದ ಮಾಡಿದ ಪ್ರಶಾಂತ್ ಭೂಷಣ್, ಬಹುತೇಕ ಯುರೋಪಿಯನ್ ದೇಶಗಳು ಇವಿಎಂಗಳಿಂದ ಬ್ಯಾಲೆಟ್ ಪೇಪರ್ ಗಳಿಗೆ ಮರಳಿವೆ ಎಂಬ ಅಂಶವನ್ನು ಉಲ್ಲೇಖಿಸಿದರು. ನಾವು ಬ್ಯಾಲೆಟ್ ಪೇಪರ್ ಗಳಿಗೆ ಮರಳಿ ಹೋಗಬಹುದುದಾಗಿದೆ. ಮತ್ತೊಂದು ಆಯ್ಕೆ ಏನೆಂದರೆ, ವಿವಿಪ್ಯಾಟ್ ಕಾಗದಗಳನ್ನು ಮತದಾರರ ಕೈಗೆ ನೀಡಿ, ಆ ಕಾಗದವನ್ನು ಮತದಾರರು ಬ್ಯಾಲೆಟ್ ಬಾಕ್ಸ್ ಗೆ ಹಾಕಲಿ ಎಂದು ಪ್ರಶಾಂತ್ ಭೂಷಣ್ ಮನವಿ ಮಾಡಿದರು.
ಪ್ರಶಾಂತ್ ಭೂಷಣ್ ತಮ್ಮ ವಾದವನ್ನು ಸಮರ್ಥಿಸುವುದಕ್ಕಾಗಿ ಜರ್ಮನಿಯ ಉದಾಹರಣೆ ನೀಡಿದರು. ಇದಕ್ಕೆ ಜರ್ಮನಿಯ ಜನಸಂಖ್ಯೆ ಎಷ್ಟು ಎಂದು ನ್ಯಾಯಪೀಠ ಕೇಳಿದಾಗ ಜರ್ಮನಿಯದ್ದು 6 ಕೋಟಿ, ಭಾರತದ್ದು 50-60 ಕೋಟಿ ಮತದಾರರ ಸಂಖ್ಯೆ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿಗಳು 97 ಕೋಟಿಯಷ್ಟು ನೋಂದಾಯಿತ ಮತದಾರರಿದ್ದಾರೆ. ಬ್ಯಾಲೆಟ್ ಪೇಪರ್ ಗಳಿದ್ದಾಗ ಏನೆಲ್ಲಾ ಆಯಿತು ಎಂಬುದನ್ನು ನಾವು ಗಮನಿಸಿದ್ದೇವೆ ಎಂದು ಖನ್ನಾ ಹೇಳಿದ್ದಾರೆ.