ಕಾಸರಗೋಡು: ಬತ್ತಿ ಬರಡಾಗುತ್ತಿರುವ ಹೊಳೆಗಳಿಗೆ ಮರುಜೀವ ನೀಡುವ ಹಾಗೂ ಜಲಸಂರಕ್ಷಣೆ ಧ್ಯೇಯದೊಂದಿಗೆ ನದಿ ಯಾತ್ರೆ ನಡೆಸಲು ನ್ಯಾಶನಲ್ ಎನ್‍ಜಿಓ ಕಾನ್‍ಫೆಡರೇಶನ್ ತೀರ್ಮಾನಿಸಿದೆ. 'ಒಳ್ಳೆಯ ದಿನಗಳಿಗಾಗಿ ಕೇರಳದ ನದಿಗಳನ್ನು ಸಂರಕ್ಷಿಸೋಣ'ಎಂಬ ಧ್ಯೇಯದೊಂದಿಗೆ ತಿರುವನಂತಪುರದ ನಯ್ಯಾರ್‍ನಿಂದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ತನಕ ನದಿಗಳಿಗೂ ಬೇಕು ಸಂರಕ್ಷಣೆ ಎಂಬ ಘೋಷಣೆಯೊಂದಿಗೆ ಯಾತ್ರ ಆಯೋಜಿಸಲಾಗಿದೆ.
ಸರ್ಕಾರದ ಅನುಮತಿಯೊಂದಿಗೆ ಯಾತ್ರೆ ನಡೆಯಲಿದ್ದು, ರಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಯಾಥ್ರೆ ಸಂಚರಿಸಲಿದೆ. ಅಲ್ಲದೆ ನದಿ ದಡದಲ್ಲಿ ಹೂದೋಟವನ್ನೂ ನಿರ್ಮಿಸಲಾಗುವುದು. ಮೇ ತಿಂಗಳ ಮೊದಲ ವಾರ ಅಟ್ಟಂಗಾಲ್‍ನ ಮಾಮಂ ಹೊಳೆಯಲ್ಲಿ ಯಾತ್ರೆಯ ಔಪಚರಿಕ ಉದ್ಘಾಟನೆ ನಡೆಯಲಿರುವುದು. ನ್ಯಾಶನಲ್ ಎನ್‍ಜಿಓ ಕಾನ್‍ಫೆಡರೇಶನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಕೆ.ಎನ್ ಆನಂದ ಕುಮಾರ್ ನೇತೃತ್ವದಲ್ಲಿ ನದಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಸ್ವಯಂಸೇವಾ ಸಂಘಟನೆಗಳ 3ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಲಸಂರಕ್ಷಣೆ ಬಗ್ಗೆ ಜನತೆಗೆ ಸ್ಪಷ್ಟ ಸಂದೇಶ ನೀಡುವುದರ ಜತೆಗೆ ಬರಡಾಗುತ್ತಿರುವ ಹೊಳೆಗಳಿಗೆ ಜೀವ ತುಂಬುವ ಹಾಗೂ ಹೊಳೆ, ತೊರೆಗಳನ್ನು ನಿರಂತರ ಹರಿಯುವಂತೆ ಮಾಡುವ ವಿಧಾನಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ಯಾತ್ರೆಯನ್ನು ಹೆಚ್ಚು ಜನಪರಗೊಳಿಸಲು ವಿವಿಧ ಸಪರ್ಧೆಗಳು, ಕಲಾ ಕಾರ್ಯಕ್ರಮ, ಬೀದಿ ನಾಟಕ, ಓಟ್ಟಂ ತುಳ್ಳಲ್ ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಪ್ರದೇಶದ ಜನರನ್ನು ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದರ ಜತೆಗೆ ಜಲಸಂರಕ್ಷಣೆಯಲ್ಲಿ ಕೈಜೋಡಿಸುವಂತೆ ಮಾಡಲಾಗುವುದು ಎಂದು ನ್ಯಾಶನಲ್ ಎನ್‍ಜಿಓ ಕಾನ್‍ಫೆಡರೇಶನ್ ರಾಷ್ಟ್ರೀಯ ಸಮಯೋಜಕ ಅನಂತುಕೃಷ್ಣನ್ ತಿಳಿಸಿದ್ದಾರೆ. ಡಾ. ವಿ. ಸುಭಾಶ್ಚಂದ್ರ ಬೋಸ್ ಯಾತ್ರೆಯ ಪ್ರಧಾನ ಸಂಚಾಲಕರಾಗಿರಲಿದ್ದಾರೆ.