ಲಡಾಖ್: ಕಳೆದ ತಿಂಗಳು 21 ದಿನಗಳ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದ ಹವಾಮಾನ ಹೋರಾಟಗಾರ ಸೋನಮ್ ವಾಂಗ್‌ಚುಕ್, ಚೀನಾ-ಭಾರತ ಗಡಿಯಲ್ಲಿನ ಹುಲ್ಕುಗಾವಲನ್ನು ಅತಿಕ್ರಮಣ ಮಾಡಲಾಗಿದೆ ಎಂಬ ಆರೋಪದ ಕುರಿತು ವಾಸ್ತವ ಪರಿಶೀಲನೆ ನಡೆಸಲು ಲಡಾಖ್ ಜನರು ನನ್ನೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದಾರೆ.
"10,000 ಲಡಾಖಿಗಳು ನನ್ನೊಂದಿಗೆ ಗಡಿಯ ಬಳಿಗೆ ಮೆರವಣಿಗೆ ನಡೆಸಲಿದ್ದಾರೆ" ಎಂದು ಅವರು ತಿಳಿಸಿದ್ದಾರೆ.
ಎಪ್ರಿಲ್ 7ರಂದು ವಾಸ್ತವ ನಿಯಂತ್ರಣ ರೇಖೆಯ ಕಡೆಗೆ ಜನರು ಮೆರವಣಿಗೆ ನಡೆಸಬೇಕು ಎಂದು ಸೋನಮ್ ವಾಂಗ್‌ಚುಕ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಆಡಳಿತವು ಲೇಹ್‌ನಲ್ಲಿ ನಿಷೇಧಾಜ್ಞೆ ಹೇರಿದೆ. ಇದರೊಂದಿಗೆ, 24 ಗಂಟೆಗಳ ಕಾಲ ಅಂತರ್ಜಾಲ ಸೇವೆಯ ವೇಗವನ್ನು 4 ಜಿಯಿಂದ 2 ಜಿಗೆ ತಗ್ಗಿಸುವಂತೆ ಪೊಲೀಸರು ಆದೇಶಿಸಿದ್ದಾರೆ. ಸೆಕ್ಷನ್ 144 ಹೇರಲಾಗಿದೆ.
ಈ ಮೆರವಣಿಗೆಗೆ ಕಾರಣವನ್ನು ವಿವರಿಸಿರುವ ವಾಂಗ್‌ಚುಕ್, "ಒಂದು ಕಡೆ ಭಾರತೀಯ ಕಾರ್ಪೊರೇಟ್ ಸಂಸ್ಥೆಗಳಿಗೆ ಲಡಾಖಿಗಳು ಸುಮಾರು 1,50,000 ಚದರ ಕಿಮೀ ಹುಲ್ಲುಗಾವಲಿರುವ ತಮ್ಮ ನೆಲ ಕಳೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ಅವರು ತಮ್ಮ ಹುಲ್ಲುಗಾವಲನ್ನು ಚೀನಾಗೆ ಕಳೆದುಕೊಳ್ಳುತ್ತಿದ್ದಾರೆ. ಉತ್ತರದಿಂದ ಅತಿಕ್ರಮಣ ಮಾಡುತ್ತಿರುವ ಚೀನಾ, ಕಳೆದ ಐದು ವರ್ಷಗಳಲ್ಲಿ ದೊಡ್ಡ ಪ್ರಮಾಣದ ಭಾರತದ ನೆಲವನ್ನು ಅತಿಕ್ರಮಿಸಿದೆ" ಎಂದು ಹೇಳಿದ್ದಾರೆ.
ನನ್ನೊಂದಿಗೆ ಹೆಜ್ಜೆ ಹಾಕಲಿರುವ ಅಲೆಮಾರಿ ನಾಯಕರು ತಾವು ಈ ಹಿಂದೆ ಹುಲ್ಲು ಮೇಯಿಸಲು ಎಷ್ಟು ದೂರ ಹೋಗುತ್ತಿದ್ದೆವು ಹಾಗೂ ಈಗ ಎಲ್ಲಿಗೆ ನಿಲ್ಲಬೇಕಾಗಿ ಬರುತ್ತಿದೆ ಎಂಬುದನ್ನು ನನಗೆ ತೋರಿಸಲಿದ್ದಾರೆ ಎಂದೂ ಸೋನಮ್ ವಾಂಗ್‌ಚುಕ್ ಹೇಳಿದ್ದಾರೆ.