ಮಂಜೇಶ್ವರ : ಲೋಕಸಭಾ ಚುನಾವಣೆಯಲ್ಲಿ ನಕಲಿಮತದಾನ ತಡೆಗಟ್ಟಲು ಮತಗಟ್ಟೆಗಳಲ್ಲಿ ವ್ಯಾಪಕವಾಗಿ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಿದ್ದರೂ, ಮಂಜೇಶ್ವರ ಮಂಡಲದ ಬಹುತೇಕ ಕಡೆ ವೆಬ್‍ಕಾಸ್ಟಿಂಗ್ ಸಮರ್ಪಕವಾಗಿ ಚಟುವಟಿಕೆ ನಡೆಸದಿರುವುದು ಸಮಸ್ಯೆಗೆ ಕಾರಣವಾಗಿತ್ತು. ಒಂದು ಬೂತಿನ ಚಿತ್ರ ದಾಖಲಾಗುತ್ತಿದ್ದರೆ, ಇನ್ಯಾವುದೋ ಕೇಂದ್ರದ ಮತದಾನ ಪ್ರಕ್ರಿಯೆ ದಾಖಲಾಗುತ್ತಿತ್ತು. ತಾಂತ್ರಿಕ ಅಡಚಣೆಯಿಂದ ಕೆಲವೊಂದು ವೆಬ್‍ಕ್ಯಾಮರಾ ವ್ಯವಸ್ಥೆಯನ್ನು ಸ್ಥಗಿತಗೊಳಿಸಬೇಕಾಗಿ ಬಂದಿರುವುದಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ. ಇನ್ಬಾಶೇಖರ್ ಸ್ಪಷ್ಟಪಡಿಸಿದ್ದಾರೆ.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸನಿಹದ ಎಲ್‍ಎಸ್‍ಜಿಡಿ ಕಚೇರಿಯಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆಯನ್ನು ನೇರವಾಗಿ ವೀಕ್ಷಿಸುವ ನಿರೀಕ್ಷಣಾ ಕೇಂದ್ರವನ್ನು ಸಜ್ಜುಗೊಳಿಸಲಾಗಿತ್ತು. 43ಇಂಚಿನ 14ಪರದೆಗಳನ್ನು ಸ್ಥಾಪಿಸಿ 90ಲ್ಯಾಪ್‍ಟ್ಯಾಪ್‍ಗಳನ್ನು ಅಳವಡಿಸಿ, ಜಿಲ್ಲೆಯ ಎಲ್ಲಾ ಮತಗಟ್ಟೆಗಳ ಚಟುವಟಿಕೆಗಳನ್ನೂ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ಕಂಟ್ರೋಲ್ ರೂಮ್‍ನಲ್ಲಿ 90ಮಂದಿ ಸಿಬ್ಬಂದಿ ಇವುಗಳ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದರು.