ಲಖನೌ: ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿ, ಹಣೆಯಲ್ಲಿ ಗಂಧ ಅಥವಾ ವಿಭೂತಿ ಹಚ್ಚಿಕೊಂಡು, ಗೆರುವಾ (ಕಿತ್ತಳೆ ಬಣ್ಣದ) ವಸ್ತ ಧರಿಸಿಕೊಂಡು ಥೇಟ್ ಅರ್ಚಕರಂತೆ ಪ್ರಸಿದ್ಧ ವಾರಾಣಸಿಯ ಕಾಶಿ ವಿಶ್ವನಾಥ ದೇಗುಲದ ಗರ್ಭಗುಡಿಯಲ್ಲಿ ಉತ್ತರಪ್ರದೇಶದ ಪೊಲೀಸ್ ಸಿಬ್ಬಂದಿ, ಭಕ್ತರು ದರ್ಶನಕ್ಕೆ ಬರುವ ವೇಳೆ ಕರ್ತವ್ಯ ನಿರ್ವಹಿಸಲಿದ್ದಾರೆ.
ವಿಶ್ವನಾಥನ ಗರ್ಭಗುಡಿಯ ಕರ್ತವ್ಯಕ್ಕೆ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿಗೆ ಮಾತ್ರ ಈ ಹೊಸ ವಸ್ತ್ರಸಂಹಿತೆ ಅನ್ವಯಿಸಲಿದೆ. ಗರ್ಭಗುಡಿಯಲ್ಲಿ ಕರ್ತವ್ಯ ನಿಯೋಜಿತ ಮಹಿಳಾ ಪೊಲೀಸ್ ಸಿಬ್ಬಂದಿಯೂ ಈ ವಸ್ತ್ರ ಸಂಹಿತೆ ಪಾಲಿಸಲಿದ್ದಾರೆ. ದೇವಾಲಯದಲ್ಲಿ ಈ ಹೊಸ ಪ್ರಯೋಗ ಬುಧವಾರದಿಂದ ಆರಂಭವಾಗಿದೆ ಎಂದು ವಾರಣಾಸಿ ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
'ಭಕ್ತರ ಸೌಕರ್ಯ ಗಮನದಲ್ಲಿಟ್ಟುಕೊಂಡು ದೇವಾಲಯದಲ್ಲಿ ಸೌಹಾರ್ದ ವಾತಾವರಣ ಒದಗಿಸುವ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.
ದೇವಸ್ಥಾನದಲ್ಲಿ ಪೊಲೀಸರು ತಮ್ಮೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ. ಜನಸಂದಣಿ ನಿಯಂತ್ರಿಸಲು ಆಗಾಗ್ಗೆ ದೈಹಿಕ ಬಲ ಬಳಸುತ್ತಾರೆ ಎಂದು ಭಕ್ತರಿಂದ ದೂರುಗಳು ಬಂದಿವೆ. ಪುರೋಹಿತರ ಮಾತನ್ನು ಸುಲಭವಾಗಿ ಪಾಲಿಸುವ ಭಕ್ತರು ಕೆಲವೊಮ್ಮೆ ಪೊಲೀಸರ ಮಾತನ್ನು ಕೇಳುವುದಿಲ್ಲ. ಪುರೋಹಿತರ ವೇಷದಲ್ಲಿ ಪೋಲಿಸರು ಭಕ್ತರ ಗುಂಪನ್ನು ಸೌಮ್ಯವಾಗಿ ನಿಭಾಯಿಸಬಹುದೆಂದು ಈ ಹೊಸ ವಸ್ತ್ರಸಂಹಿತೆ ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
'ಪುರೋಹಿತ ಪೊಲೀಸರು' ಭಕ್ತರನ್ನು 'ಹರ ಹರ ಮಹಾದೇವ್' ಜೈಕಾರದೊಂದಿಗೆ ಸ್ವಾಗತಿಸಲಿದ್ದಾರೆ. ವಾರಣಾಸಿಯ ಇತರ ಪ್ರಮುಖ ಧಾರ್ಮಿಕ ಸ್ಥಳಗಳ ಬಗ್ಗೆಯೂ ಭಕ್ತರಿಗೆ ಮಾಹಿತಿ ನೀಡಲಿದ್ದಾರೆ. ಅರ್ಚಕರಂತೆ ವೇಷ ಧರಿಸುವ ಪೊಲೀಸರು ಗರ್ಭಗುಡಿಯಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ಅವರಿಗೆ ಮೂರು ದಿನಗಳ ವಿಶೇಷ ತರಬೇತಿ ಕೂಡ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.