ನವದೆಹಲಿ: ಇರಾನ್ ಸೇನೆ ವಶಪಡಿಸಿಕೊಂಡಿದ್ದ ಇಸ್ರೇಲ್ ಜೊತೆ ನಂಟಿರುವ ನೌಕೆ 'ಎಂಎಸ್‌ಸಿ ಏರೀಸ್'ನಲ್ಲಿದ್ದ 17 ಜನ ಭಾರತೀಯರ ಪೈಕಿ ಏಕೈಕ ಮಹಿಳಾ ಸಿಬ್ಬಂದಿಯಾದ ಆಯನ್ ಟೆಸ್ಸಾ ಜೋಸೆಫ್ ಅವರನ್ನು ಬಿಡುಗಡೆ ಮಾಡಲಾಗಿದ್ದು, ಅವರು ತಾಯ್ನಾಡಿಗೆ ಗುರುವಾರ ವಾಪಸಾಗಿದ್ದಾರೆ.

ಇದು, ಇರಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ನಡೆಸಿದ ಸತತ ಪ್ರಯತ್ನಗಳಿಗೆ ಸಿಕ್ಕ ಜಯವಾಗಿದೆ.
ಕೇರಳದ ತ್ರಿಶ್ಶೂರಿನವರಾದ ಜೋಸೆಫ್ ಅವರು ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ ಬಂದಿಳಿದರು. ಅವರನ್ನು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಅಧಿಕಾರಿಯೊಬ್ಬರು ಬರಮಾಡಿಕೊಂಡರು.
ಈ ನೌಕೆಯನ್ನು ಏಪ್ರಿಲ್ 13ರಂದು ಇರಾನ್‌ನ ಸೇನೆ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ, ನೌಕೆಯಲ್ಲಿದ್ದ ಭಾರತೀಯರ ಸುರಕ್ಷಿತ ಬಿಡುಗಡೆಗೆ ಟೆಹರಾನ್‌ನಲ್ಲಿರುವ ರಾಯಭಾರ ಕಚೇರಿಯು ಇರಾನ್ ಸರ್ಕಾರದೊಂದಿಗೆ ಸತತ ಮಾತುಕತೆ ನಡೆಸಿತ್ತು.
'ಸದ್ಯ, ಆಯನ್ ಜೋಸೆಫ್ ಅವರನ್ನು ಬಿಡುಗಡೆ ಮಾಡಲಾಗಿದೆ. ಉಳಿದವರ ಬಿಡುಗಡೆಗಾಗಿ ಇರಾನ್ ಸರ್ಕಾರದ ಜೊತೆ ಮಾತುಕತೆ ಮುಂದುವರಿದಿದೆ' ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಎಸ್.ಜೈಶಂಕರ್ ಅವರು ಇರಾನ್‌ನ ವಿದೇಶಾಂಗ ಸಚಿವ ಹೊಸೈನ್ ಅಮೀರ್ ಅಬ್ದುಲ್ಲಾಹಿಯನ್ ಅವರೊಂದಿಗೆ ಭಾನುವಾರ ದೂರವಾಣಿ ಮೂಲಕ ಮಾತುಕತೆ ನಡೆಸಿ, ಎಂಎಸ್‌ಸಿ ಏರೀಸ್ ನೌಕೆಯಲ್ಲಿರುವ ಭಾರತೀಯರನ್ನು ಬಿಡುಗಡೆ ಮಾಡುವಂತೆ ಕೋರಿದ್ದರು.