ನವದೆಹಲಿ: 'ಇಸ್ರೇಲ್ ದೃಢವಾಗಿದೆ ಮತ್ತು ಶಕ್ತಿಯುತವಾಗಿದೆ. ಅಗತ್ಯ ಬಿದ್ದರೆ ಇರಾನ್ ಜೊತೆಗೆ ಸಂಘರ್ಷ ನಡೆಸಲಿದೆ' ಎಂದು ಭಾರತದಲ್ಲಿನ ಇಸ್ರೇಲ್‌ನ ರಾಯಭಾರಿ ಪ್ರತಿಪಾದಿಸಿದ್ದಾರೆ. 'ಪಶ್ಚಿಮ ಏಷ್ಯಾ ವಲಯದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಭಾರತ ನಿರ್ಣಾಯಕ ಪಾತ್ರ ವಹಿಸಬೇಕು' ಎಂದೂ ಕೋರಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ರಾಯಭಾರಿ ನಾರ್ ಗಿಲೋನ್ ಅವರು, 'ಅಮೆರಿಕ ಮತ್ತು ಇತರ ಮಿತ್ರ ರಾಷ್ಟ್ರಗಳ ಬೆಂಬಲದೊಂದಿಗೆ ಇಸ್ರೇಲ್ ಸೇನೆಯು ದಾಳಿಯನ್ನು ಶೇ 99ರಷ್ಟು ತಡೆದಿದೆ' ಎಂದರು.
ಆದರೆ, ನೆವಟಿಮ್ ವಾಯುನೆಲೆ ಮೇಲಿನ ದಾಳಿಯಿಂದಾಗಿ ಅಲ್ಪಪ್ರಮಾಣದಲ್ಲಿ ಹಾನಿಯಾಗಿದೆ ಎಂದು ತಿಳಿಸಿದರು.
ಅಂತರರಾಷ್ಟ್ರಿಯ ಮಟ್ಟದಲ್ಲಿ ಭಾರತಕ್ಕೆ ಗೌರವಾನ್ವಿತ ಹೆಸರಿದೆ. ತನ್ನ ಪ್ರಭಾವ, ವರ್ಚಸ್ಸು ಬಳಸಿಕೊಂಡು ಸಹಜ ಪರಿಸ್ಥಿತಿ ನೆಲೆಯೂರುವಂತೆ ಮಾಡಲು ಮುಂದಾಗಬೇಕು ಎಂದು ಗಿಲೋನ್ ಅಭಿಪ್ರಾಯಪಟ್ಟರು.
'ಒಂದು ವಲಯವಾಗಿ ಪಶ್ಚಿಮ ಏಷ್ಯಾ ಭಾರತಕ್ಕೆ ಮಹತ್ವದ್ದಾಗಿದೆ. ಈ ವಲಯದಲ್ಲಿ ಲಕ್ಷಾಂತರ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಸೌದಿ ಅರೇಬಿಯಾ, ಯುಎಇ, ಕತಾರ್ ವ್ಯಾಪ್ತಿಯಲ್ಲಿ ಹಲವು ಉದ್ಯಮ ಸಂಪರ್ಕಗಳಿವೆ. ಹೀಗಾಗಿ, ಸಹಜಸ್ಥಿತಿ ಸ್ಥಾಪನೆಗೆ ಭಾರತ ಹೆಚ್ಚು ಸಕ್ರಿಯವಾಗಿ ತೊಡಗಲಿದೆ ಎಂಬುದಾಗಿ ಭಾವಿಸಿದ್ದೇನೆ' ಎಂದು ಅವರು ತಿಳಿಸಿದರು.
ಇರಾನ್ ದಾಳಿಗೆ ಭಾನುವಾರ ಪ್ರತಿಕ್ರಿಯಿಸಿದ್ದ ಭಾರತ, 'ಇದು ಪಶ್ಚಿಮ ಏಷ್ಯಾ ವಲಯದಲ್ಲಿ ಬಿಕ್ಕಟ್ಟು ಹೆಚ್ಚಲು ಕಾರಣವಾಗಬಹುದು. ಉಭಯ ದೇಶಗಳು ಹಿಂಸೆಯನ್ನು ತಕ್ಷಣ ನಿಲ್ಲಿಸಬೇಕು' ಎಂದು ಹೇಳಿತ್ತು.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು, ಇರಾನ್ ಮತ್ತು ಇಸ್ರೇಲ್‌ನ ವಿದೇಶಾಂಗ ಸಚಿವರ ಜೊತೆಗೂ ಈ ಸಂಬಂಧ ಪ್ರತ್ಯೇಕವಾಗಿ ದೂರವಾಣಿಯಲ್ಲಿ ಮಾತನಾಡಿದ್ದರು.