ಪೆರ್ಲ: ಎಣ್ಮಕಜೆ ಪಂಚಾಯತಿ ನಲ್ಕ-ಬಿರ್ಮೂಲೆ ರಸ್ತೆಯಲ್ಲಿ ಕುಡಿಯುವ ನೀರಿನ ಪೈಫ್ ಒಡೆದು ಅಲ್ಲಲ್ಲಿ ನೀರು ಪೋಲಾಗುತ್ತಿರುವುದು ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿದೆ. ವಾಡಿಕೆಗಿಂತ ಹೆಚ್ಚಿನ ತಾಪಮಾನ ಹಾಗೂ ನೀರಿನ ತತ್ವಾರದ ಮಧ್ಯೆ ಅಧಿಕೃತರು ಜನಸಾಮಾನ್ಯರ ನೆಲೆಗೊಳ್ಳುವಿಕೆಗೆ ಮೂಲಾಧಾರವಾದ ಕುಡಿಯುವ ನೀರನ್ನು ಪೋಲುಗೊಳಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಗ್ರಾಮ ಪಂಚಾಯತಿ ಅಧಿಕೃತರು ನೀರು ವ್ಯರ್ಥ ಪೋಲು ಮಾಡದಂತೆ ಒಂದೆಡೆ ನಿರಂತರ ಜನಜಾಗೃತಿ, ಸೂಚನೆಗಳನ್ನು ನೀಡುತ್ತಿದ್ದರೂ, ದೀಪದ ಸುತ್ತ ಕತ್ತಲು ಎಂಬಂತೆ ತಮ್ಮದೇ ತಪ್ಪುಗಳನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವುದು ಅಚ್ಚರಿಯೊಂದಿಗೆ ಆಡಳಿತ ಯಂತ್ರದ ಶುದ್ದ ಹುಂಬತನವನ್ನು ಜಾಹೀರುಗೊಳಿಸುತ್ತಿದೆ.
ಎಣ್ಮಕಜೆ ಗ್ರಾಮ ಪಂಚಾಯತಿಯ ಗಡಿ ಗ್ರಾಮವಾದ ಪಾಪಿತ್ತಡ್ಕ, ಬಿರ್ಮೂಲೆ, ಬಾಕಿಲಪದವು ಮೊದಲಾದೆಡೆಗೆ ನೀರು ಪೂರೈಸುವ ಕೇರಳ ಜಲಮಂಡಳಿಯ ಈ ಪೈಪ್ ಲೈನ್ ಗ್ರಾಮೀಣ ಪ್ರದೇಶದ ಕಡುಬೇಸಿಗೆಯ ಕುಡಿನೀರು ಆವಶ್ಯಕತೆಗೆ ವರದಾನವಾಗಿದೆ. ಆದರೆ, ನೀರಿನ ಅಲಭ್ಯತೆಯ ಈ ಹೊತ್ತಲ್ಲಿ ನಿರ್ವಹಣೆಯ ಲೋಪಗಳ ಕಾರಣ ಪೈಫ್ ಒಡೆದು ನೀರುಪೋಲಾಗುತ್ತಿರುವುದು ಹೃದಯವನ್ನು ಭಾರಗೊಳಿಸುತ್ತಿದೆ. ನಲ್ಕದಿಂದ ಬಿರ್ಮೂಲೆ ಮಧ್ಯೆ ಭಾನುವಾರದಿಂದ ಮೂರು ಕಡೆಗಳಲ್ಲಿ ಪೈಫ್ ಒಡೆದಿರುವುದು ಕಂಡುಬಂದಿದ್ದು, ನಿರಂತರ ನೀರು ಪೋಲಾಗಿ ಗ್ಯಾಲನ್ ಗಟ್ಟಲೆ ನೀರು ಈಗಾಗಲೇ ವ್ಯರ್ಥವಾಗಿದೆ. ಸ್ಥಳೀಯರು ಭಾನುವಾರವೇ ಈ ಬಗ್ಗೆ ಅಧಿಕೃತರನ್ನು ಸಂಪರ್ಕಿಸಲು ಯತ್ನಿಸಿದ್ದು, ಭಾನುವಾರವಾದ್ದರಿಂದ ಯಾರೂ ಸಂಪರ್ಕಕ್ಕೆ ಲಭಿಸಿಲ್ಲ ಎನ್ನಲಾಗಿದೆ.
ನೂರಾರು ಜನರು ಬಳಸುವ ಜೀವನಾಡಿಯಾದ ಶುದ್ದ ಕುಡಿಯುವ ನೀರು ಪೂರೈಕೆಯ ಪೈಪ್ ಒಡೆದಿರುವ ಈ ಲೋಪಗಳನ್ನು ಇನ್ನಾದರೂ ಸರಿಪಡಿಸಬೇಕಿದ್ದು, ಜನರಿಗೆ ಜಾಗೃತಿ ಮೂಡಿಸುವ ಜೊತೆಗೆ ತಮ್ಮ ಸಿಬ್ಬಂದಿಗಳಿಗೂ ಒಂದಷ್ಟು ಕರ್ತವ್ಯಪರತೆಯ ಬಗ್ಗೆ ಪಾಠ ಮತ್ತು ಕಾಲಾಕಾಲಕ್ಕೆ ನಿರ್ವಹಣೆಗಿರುವ ವೆಚ್ಚಗಳನ್ನು ಸಮರ್ಪಕವಾಗಿ ಬಳಸಬೇಕೆಂದು ಜನರು ಆಗ್ರಹಿಸಿದ್ದಾರೆ.
ಅಭಿಮತ: ಪೈಫ್ ಒಡೆದ ಭಾಗವನ್ನು ಸೋಮವಾರ ಸಂಜೆ ಸರಿಪಡಿಸಲಾಗುತ್ತಿದೆ. ರಸ್ತೆ ಬದಿ ಒಡೆದಿರುವುದನ್ನು ಸರಿಪಡಿಸಲಾಗುವುದು. ಇನ್ನು, ನಮ್ಮರಿವಿಗೆ ಬಾರದಿರುವಲ್ಲಿ ಒಡೆದಿರುವುದು ಪತ್ತೆಯಾದಲ್ಲಿ ಸರಿಪಡಿಸಲಾಗುವುದು.
- ಜಯರಾಜ್
ಸಹಾಯಕ ಅಭಿಯಂತರ.
ಎಣ್ಮಕಜೆ ಗ್ರಾಮ ಪಂಚಾಯತಿ ಜಲಪೂರೈಕೆ ಇಲಾಖೆ.