ಈರೋಡ್: ಚಿತ್ತೋಡ್‌ನಲ್ಲಿರುವ ಸರ್ಕಾರಿ ರಸ್ತೆ ಮತ್ತು ಸಾರಿಗೆ ತಂತ್ರಜ್ಞಾನ ಸಂಸ್ಥೆಯಲ್ಲಿನ ಮತ ಎಣಿಕೆ ಕೇಂದ್ರದ ಸಿಸಿಟಿವಿ ಕ್ಯಾಮೆರಾಗಳ ಪೈಕಿ ಒಂದು ಕ್ಯಾಮೆರಾ ಭಾನುವಾರ ಮಧ್ಯರಾತ್ರಿ ಕಾರ್ಯನಿರ್ವಹಿಸದೇ ವಿಫಲವಾಗಿತ್ತು ಎಂದು ಜಿಲ್ಲಾಧಿಕಾರಿ ಮತ್ತು ಈರೋಡ್ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ರಾಜ ಗೋಪಾಲ್ ಸುಂಕರ ಸೋಮವಾರ ತಿಳಿಸಿದ್ದಾರೆ.
ಇವಿಎಂಗಳನ್ನು ಇರಿಸಲಾಗಿರುವ ಕ್ಷೇತ್ರದ ಮತ ಎಣಿಕೆ ಕೇಂದ್ರಗಳಲ್ಲಿ 221 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭಾನುವಾರ ಮಧ್ಯರಾತ್ರಿ 12 ಗಂಟೆಗೆ ಇದ್ದಕ್ಕಿದ್ದಂತೆ ಅದರಲ್ಲಿ ಒಂದು ಕ್ಯಾಮೆರಾ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿತ್ತು. ತಕ್ಷಣ ಗಮನ ಹರಿಸಿ ಒಂದು ಗಂಟೆಯೊಳಗೆ ಸಮಸ್ಯೆ ಸರಿಪಡಿಸಲಾಗಿದೆ ಎಂದು ಚುನಾವಣಾಧಿಕಾರಿ ಸೋಮವಾರ ಮಧ್ಯಾಹ್ನ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಈ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳು ದೂರು ನೀಡಿಲ್ಲ. ವಿದ್ಯುನ್ಮಾನ ಉಪಕರಣಗಳಲ್ಲಿ ಇಂತಹ ವೈಫಲ್ಯಗಳು ಸಾಮಾನ್ಯ. ಯಾವುದೇ ಸಂಶಯದ ಚಟುವಟಿಕೆ ಕಂಡುಬಂದಿಲ್ಲ. ಎಣಿಕೆ ಕೇಂದ್ರಗಳಲ್ಲಿ ಮೂರು ಹಂತದ ಪೊಲೀಸ್ ರಕ್ಷಣೆ ಒದಗಿಸಲಾಗಿದ್ದು, ಸಿಐಎಸ್‌ಎಫ್ ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿ ಸ್ಟ್ರಾಂಗ್‌ರೂಮ್‌ಗಳಲ್ಲಿ ದಿನದ 24 ತಾಸು ನಿರಂತರ ಕಾವಲಿದ್ದಾರೆ ಎಂದು ಅವರು ಹೇಳಿದರು.