ಹ್ಯೂಸ್ಟನ್: ಹ್ಯೂಸ್ಟನ್ ವಿಶ್ವವಿದ್ಯಾಲಯದ ಕಲನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಕನ್ನಡಿಗ ಪ್ರೊ. ಕೌಶಿಕ್ ರಾಜಶೇಖರ ಅವರು ಜಪಾನ್‌ನ ಎಂಜಿನಿಯರಿಂಗ್ ಅಕಾಡೆಮಿಯ 'ಇಂಟರ್‌ನ್ಯಾಷನಲ್ ಫೆಲೋ' ಆಗಿ ಅಯ್ಕೆಯಾಗಿದ್ದಾರೆ ಎಂದು ವಿಶ್ವವಿದ್ಯಾಲಯವು ಗುರುವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕರ್ನಾಟಕದ ಸಣ್ಣ ಹಳ್ಳಿಯವರಾದ ಪ್ರೊಫೆಸರ್ ಕೌಶಿಕ್ ಅವರು ವಿದ್ಯುತ್ ಪರಿವರ್ತಕ ಮತ್ತು ಸಾರಿಗೆ ವಿದ್ಯುದೀಕರಣ ವಿಭಾಗಗಳಲ್ಲಿ ನೀಡಿದ ಕೊಡುಗೆಗಾಗಿ ಈ ಮನ್ನಣೆಗೆ ಭಾಜನರಾಗಿದ್ದಾರೆ.
ಇಂಧನ ಕ್ಷೇತ್ರದಲ್ಲಿನ ಅತ್ಯುತ್ತಮ ವೈಜ್ಞಾನಿಕ ಸಂಶೋಧನೆಯನ್ನು ಪರಿಗಣಿಸಿ ಈ ಗೌರವಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ತಿಳಿಸಿದೆ.
73,000 ಸದಸ್ಯರು ಮತ್ತು 15 ಅಂತರರಾಷ್ಟ್ರೀಯ ಸದಸ್ಯರನ್ನು ಒಳಗೊಂಡಿರುವ ಅಕಾಡೆಮಿಯ ವಿಶಿಷ್ಟ ಗುಂಪಿನಲ್ಲಿ ಕೌಶಿಕ್ ರಾಜಶೇಖರ ಕೂಡ ಒಬ್ಬರು.
ಹ್ಯೂಸ್ಟನ್ ವಿಶ್ವವಿದ್ಯಾಲಯದ 'ಪವರ್ ಎಲೆಕ್ಟ್ರಾನಿಕ್ಸ್ ಮೈಕ್ರೋಗ್ರಿಡ್ಸ್ ಮತ್ತು ಸಬ್‌ಸೀ ಎಲೆಕ್ಟ್ರಿಕಲ್ ಸಿಸ್ಟಮ್ಸ್ ಸೆಂಟರ್'ನಲ್ಲಿ ರಾಜಶೇಖರ ಅವರು ನಿರ್ದೇಶಕರಾಗಿದ್ದಾರೆ. 'ಜಪಾನ್‌ನ ಎಂಜಿನಿಯರಿಂಗ್ ಅಕಾಡೆಮಿಯ ಇಂಟರ್‌ನ್ಯಾಷನಲ್ ಫೆಲೋ ಆಗಿ ಆಯ್ಕೆಯಾಗಿರುವುದು ನನಗೆ ಸಂದ ಹೆಚ್ಚಿನ ಗೌರವವಾಗಿದೆ' ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ಮೂರು ದಶಕಗಳಿಂದ ರಾಜಶೇಖರ ಅವರು ಜಪಾನಿನ ವಿದ್ಯಾರ್ಥಿಗಳು, ಎಂಜಿನಿಯರ್‌ಗಳು ಮತ್ತು ಜಪಾನ್‌ನ ಹಲವು ವಿಶ್ವವವಿದ್ಯಾಲಯಗಳ ಅಧ್ಯಾಪಕರೊಂದಿಗೆ ಕೆಲಸ ಮಾಡಿದ್ದಾರೆ.
ಇಂಧನ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸುವವರಿಗೆ 'ಗ್ಲೋಬಲ್ ಎನರ್ಜಿ ಅಸೋಸಿಯೇಷನ್' ನೀಡುವ ಅಂತರರಾಷ್ಟ್ರೀಯ ಬಹುಮಾನವು 2022ರಲ್ಲಿ ರಾಜಶೇಖರ ಅವರಿಗೆ ಸಂದಿತ್ತು.