ರುದ್ರಾಪುರ: ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅಸ್ಥಿರತೆ ಮತ್ತು ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.
ಉತ್ತರಾಖಂಡದ ರುದ್ರಾಪುರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಮೂಲಕ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಶಾಂತಿ ನೆಲೆಸುವುದಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಅಧಿಕಾರದಿಂದ ದೂರ ಉಳಿದಿರುವುದರಿಂದ ಕಾಂಗ್ರೆಸ್ಸಿಗರಲ್ಲಿ ಹತಾಶೆಯ ಭಾವನೆ ಮೂಡಿದೆ. ಈ ಬಾರಿಯೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದಂತೆ ಜನರಲ್ಲಿ ಮನವಿ ಮಾಡಿದ ಮೋದಿ, ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ಭಾರತವನ್ನು ವಿಶ್ಚದ ಮೂರನೇ ಆರ್ಥಿಕತೆ ಹೊಂದಿದ ದೇಶವನ್ನಾಗಿ ಮಾಡುವ ಭರವಸೆಯನ್ನು ಪುನರುಚ್ಚರಿಸಿದರು.
'ಭ್ರಷ್ಟರು ಜೈಲಿಗೆಹೋಗಬೇಕೆಂದು ನಿಮಗನ್ನಿಸುವುದುಲ್ಲವೇ?. ಭ್ರಷ್ಟರು ನನಗೆ ಬೆದರಿಕೆ ಒಡ್ಡಿ, ನಿಂದನೆ ಮಾಡುತ್ತಿದ್ದಾರೆ. ಆದರೆ ಭ್ರಷ್ಟರ ವಿರುದ್ಧ ಕ್ರಮ ಮುಂದುವರೆಯಲಿದೆ' ಎಂದು ಮೋದಿ ಹೇಳಿದ್ದಾರೆ.
ಮೋದಿ ಗ್ಯಾರಂಟಿ ಎಂದರೆ ಗ್ಯಾರಂಟಿ ಈಡೇರಿಸುವುದಾಗಿದೆ. ಉದ್ದೇಶಗಳು ಸರಿಯಾಗಿದ್ದಲ್ಲಿ ಅಭಿವೃದ್ಧಿಗೆ ಕಾರಣವಾಗುತ್ತದೆ ಹಾಗೂ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರತ್ಯೇಕ ಪ್ರಕರಣಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಜೆಎಂಎಂ ನಾಯಕ ಹೇಮಂತ್ ಸೊರೇನ್ ಬಂಧಿಸಿರುವುದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.