ಕೊಚ್ಚಿ: ತಿರುವನಂತಪುರಂ ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿಯಾಗಿ ಕಣದಲ್ಲಿರುವ ರಾಜೀವ್ ಚಂದ್ರಶೇಖರ್ ಅವರ ನಾಮಪತ್ರವನ್ನು ಅನೂರ್ಜಿತಗೊಳಿಸಬೇಕೆಂದು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ವಿ.ಜಿ.ಅರುಣ್, ಎಸ್. ಮನು ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಮನವಿ ಪರಿಶೀಲಿಸಿ ತಿರಸ್ಕರಿಸಿತು.
ಅರ್ಜಿ ಸ್ವೀಕಾರ ಪ್ರಕರಣದಲ್ಲಿ ದೂರು ಇದ್ದಲ್ಲಿ ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಚುನಾವಣಾ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ಸೂಚಿಸಿದೆ.
ಮಹಿಳಾ ಕಾಂಗ್ರೆಸ್ ನಾಯಕಿ ಅವನಿ ಬೆನ್ಸಾಲ್ ಮತ್ತು ರಜನಿ ಥಾಮಸ್ ಹೈಕೋರ್ಟ್‍ನಲ್ಲಿ ಪಿಐಎಲ್ ಸಲ್ಲಿಸಿದ್ದರು. ಅರ್ಜಿಯಲ್ಲಿ, ರಾಜೀವ್ ಚಂದ್ರಶೇಖರ್ ಅವರು ತಮ್ಮ ಮನೆ, ಕಾರು ಮತ್ತು ಖಾಸಗಿ ಜೆಟ್ ವಿಮಾನದ ವಿವರಗಳನ್ನು ನೀಡಿಲ್ಲ ಮತ್ತು ಅವರು ಹೊಂದಿರುವ ಕಂಪನಿಗಳ ಷೇರು ಮೌಲ್ಯವನ್ನು ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಸಲ್ಲಿಸಿದ ಅಫಿಡವಿಟ್‍ನ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಚುನಾವಣಾಧಿಕಾರಿಗಳು ನಾಮಪತ್ರ ಸ್ವೀಕರಿಸಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು. ನಂತರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ನಂತರ ನಾಮಪತ್ರ ಅರ್ಜಿ ತಿರಸ್ಕರಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.