ಬದಿಯಡ್ಕ: ಓರ್ವ ಶಿಕ್ಷಕ ತನ್ನ ವೃತ್ತಿಯ ಘನತೆ ಗೌರವಗಳನ್ನು ಕಾಪಾಡಿಕೊಂಡು, ಜೀವನದಲ್ಲಿ ಹಾಗೂ ಸಮಾಜದ ಒಳಿತಿಗಾಗಿ ಉತ್ತಮ ಕೆಲಸ ನಿರ್ವಹಿಸಿದರೆ ಮಾತ್ರವೇ ಆತನೊಬ್ಬ ಶ್ರೇಷ್ಠ ಅಧ್ಯಾಪಕನಾಗಲು ಸಾಧ್ಯ ಎಂದು ಎಡನೀರು ಶ್ರೀ ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ತಿಳಿಸಿದರು.
ಅವರು ಕಳೆದ 32 ವರ್ಷದ ಅಧ್ಯಾಪಕ ವೃತ್ತಿಯನ್ನು ಪೂರ್ತಿಗೊಳಿಸಿ ನಿವೃತ್ತಿ ಹೊಂದುವ ಎಡನೀರು ನಿವಾಸಿ ಸೂರ್ಯನಾರಾಯಣ ಭಟ್ ಅವರಿಗೆ ಭಾನುವಾರ ಎಡನೀರು ಶ್ರೀ ಮಠದ ವತಿಯಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಆಶೀರ್ವಾದ ನೀಡಿ ಮಾತನಾಡಿದರು.
ಚಿನ್ಮಯ ವಿದ್ಯಾಲಯದ ಸ್ವಾಮೀ ವಿವಿಕ್ತಾನಂದ ಸರಸ್ವತೀ ಸ್ವಾಮೀಜಿ ಕಾರ್ಯಕ್ರಮ ಮುಖ್ಯ ಅತಿಥಿಯಾಗಿದ್ದರು. ಎಡನೀರು ಶ್ರೀ ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಅಬೂಬಕರ್ ಹಾಜಿ ಶುಭ ಹಾರೈಸಿದರು. ಉಭಯ ಶ್ರೀಗಳವರು ಸೂರ್ಯ ನಾರಾಯಣ ಭಟ್ ದಂಪತಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಸೂರ್ಯನಾರಾಯಣ ಭಟ್ ಕೃತಜ್ಞತೆ ಸಲ್ಲಿಸಿದರು. ಮುರಳಿ ಕೃಷ್ಣ ಸ್ಕಂದ ಮಾನಪತ್ರ ವಾಚಿಸಿದರು. ಕುಮಾರಿ ಸ್ಮಿತಾ ಪಾರ್ಥನೆ ಹಾಡಿದರು. ಕೆ. ಸತೀಶ್ ರಾವ್ ಸ್ವಾಗತಿಸಿ, ಅಧ್ಯಾಪಕ ಕೆ.ಭವಾನಿ ಶಂಕರ ವಂದಿಸಿದರು. ನಿವೃತ್ತ ಶಿಕ್ಷಣಾಕಾರಿ ವೇಣುಗೋಪಾಲ ಎಡನೀರು ಕಾರ್ಯಕ್ರಮ ನಿರೂಪಿಸಿದರು.