ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯಿದೆಯಡಿ ಸಲ್ಲಿಸಲಾಗುವ ಅರ್ಜಿಗಳ ಕುರಿತು ದಾಖಲೆ ಇರಿಸಿಕೊಳ್ಳುವುದಿಲ್ಲ ಎಂದು ಆರ್‌ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೇಳಿದೆ.
ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯಿದೆಯಡಿ ಸಲ್ಲಿಸಲಾಗುವ ಅರ್ಜಿಗಳ ಕುರಿತು ದಾಖಲೆ ಇರಿಸಿಕೊಳ್ಳುವುದಿಲ್ಲ ಎಂದು ಆರ್‌ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೇಳಿದೆ.
ಮಹಾರಾಷ್ಟ್ರದ ಅಮರಾವತಿಯ ಹಕ್ಕು ಕಾರ್ಯಕರ್ತ ಅಜಯ್ ಬೋಸ್ ಅವರು ಆರ್‌ಟಿಐ ಅರ್ಜಿ ಸಲ್ಲಿಸಿ ಸಿಎಎ ಅಡಿ ಪೌರತ್ವ ಕೋರಿ ಅರ್ಜಿ ಸಲ್ಲಿಸಿದವರ ಸಂಖ್ಯೆಯ ಕುರಿತು ಮಾಹಿತಿ ಕೋರಿದ್ದರು.
ಇದಕ್ಕೆ ಎಪ್ರಿಲ್ 15ರಂದು ಪ್ರತಿಕ್ರಿಯಿಸಿದ ಗೃಹ ಸಚಿವಾಲಯವು, "ಈ ಕುರಿತು ಮಾಹಿತಿಯನ್ನು ಸಂಗ್ರಹಿಸಲಾಗಿಲ್ಲ, ಏಕೆಂದರೆ 1955ರ ಪೌರತ್ವ ಕಾಯಿದೆ, 2019ರ ಪೌರತ್ವ (ತಿದ್ದುಪಡಿ) ಕಾಯಿದೆ ಮತ್ತು ಅದರ ನಿಯಮಗಳು ಅರ್ಜಿಗಳ ದಾಖಲೆಗಳನ್ನು ಇರಿಸಿಕೊಳ್ಳಬೇಕೆಂಬ ನಿಬಂಧನೆ ಹೊಂದಿಲ್ಲ. ಮೇಲಾಗಿ ಆರ್‌ಟಿಐ ಕಾಯಿದೆ 2005 , ಅನ್ವಯ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿಯನ್ನು ರಚಿಸುವ ಹಾಗಿಲ್ಲ," ಎಂದು ಉತ್ತರದಲ್ಲಿ ಹೇಳಿದೆ.
ಆದರೆ ರಾಜ್ಯಸಭೆಯಲ್ಲಿ ಡಿಸೆಂಬರ್ 11, 2019ರಲ್ಲಿ ಈ ಕಾಯಿದೆ ಅನುಮೋದನೆ ಪಡೆದಾಗ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಕಾಯಿದೆಯಿಂದ ಲಕ್ಷದಿಂದ ಕೋಟಿಯವರೆಗೆ ಜನರು ಪ್ರಯೋಜನ ಪಡೆಯಲಿದ್ದಾರೆ ಎಂದಿದ್ದರು. ಆದರೆ ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒʼಬ್ರಿಯಾನ್ ಅವರು ಗುಪ್ತಚರ ಬ್ಯುರೋ ವರದಿಯ ಪ್ರಕಾರ ಈ ಕಾಯಿದೆಯಿಂದ ತಕ್ಷಣಕ್ಕೆ 31,000 ಜನರು ಪ್ರಯೋಜನ ಪಡೆಯಲಿದ್ದಾರೆ ಎಂದಿದ್ದರು.