ಕಾಸರಗೋಡು: ಧರ್ಮಮಾರ್ಗವೇ ವಿಶ್ವಕ್ಕೆ ಆಧಾರ, ಧರ್ಮವಿದ್ದರೆ ಎಲ್ಲಾ ಕೆಲಸಕಾರ್ಯಗಳು ನಿರಾತಂಕವಾಗಿ ನಡೆಯುತ್ತದೆ ಎಂದು ಶೃಂಗೇರಿ ದಕ್ಷಿಣಾಮ್ನಾಯ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರು ತಿಳಿಸಿದ್ದಾರೆ.
ಅವರು ಬಾಯಾರು ಗ್ರಾಮದ ಆವಳಮಠದಲ್ಲಿ ನಡೆದ ಪುರಪ್ರವೇಶ ಕಾರ್ಯಕ್ರಮದಲ್ಲಿ ಅನುಗ್ರಹ ಆಶೀರ್ವಚನ ನೀಡಿದರು.
ವೈದಿಕ ಪರಂಪರೆ ಜೀವಂತವಾಗಿರುವ ತನಕ ವಿಶ್ವವೂ ಚೆನ್ನಾಗಿರುತ್ತದೆ. ಇದಕ್ಕೆ ತೊಂದರೆ ಬಂದರೆ ವಿಶ್ವವೂ ದುಃಖಪಡಬೇಕಾಗುತ್ತದೆ. ಸನಾತನ ಪರಂಪರೆ ಮತ್ತು ಧರ್ಮದ ಕಾಪಿಡುವಿಕೆ ಎಲ್ಲರ ಕರ್ತವ್ಯವಾಗಿದೆ. ಸಾಮಾನ್ಯರಿಂದ ಹಿಡಿದು ಧನಿಕನ ತನಕ ಎಲ್ಲರೂ ಇರುವುದು ಬಂಧನದಲ್ಲಿ, ಆಚಾರ ಸಂಪ್ರದಾಯಗಳು ನಮಗೆ ಮೋಚಕ ಶಕ್ತಿಯಾಗಿದೆ. ಉಪಾಸನೆ, ಅಧ್ಯಯನಗಳ ಮೂಲಕ ಪಾರಮಾರ್ಥಿಕ ಸತ್ಯದ ಅರಿವು ಪ್ರತಿಯೊಬ್ಬರಿಗೂ ಬರಬೇಕು ಎಂದು ತಿಳಿಸಿದರು. ಜೀವನ ನಡೆಸುವ ಜವಾಬ್ದಾರಿ ಮನುಷ್ಯ ಸಹಿತ ಎಲ್ಲಾ ಪ್ರಾಣಿಗಳಿಗೂ ಇದೆ. ಆದರೆ ಜೀವನದಲ್ಲಿ ಸಾರ್ಥಕ್ಯವನ್ನು ಕಂಡುಕೊಳ್ಳುವ ಯೋಗ್ಯತೆ ಮನುಷ್ಯನಿಗೆ ಮಾತ್ರ ಇರುತ್ತದೆ. 1200 ವರ್ಷಗಳ ಹಿಂದೆ ಯತಿಶ್ರೇಷ್ಠರಾದ ಶ್ರೀ ಶಂಕರ ಭಗವತ್ಪಾದರು ಹಾಕಿ ಕೊಟ್ಟ ದಾರಿಯಲ್ಲಿ ಪ್ರತಿಯೋರ್ವರು ಮುನ್ನಡೆಯಬೇಕಾಗಿದೆ. ಧರ್ಮಮಾರ್ಗದಲ್ಲಿ ಮುನ್ನಡೆದವನಿಗೆ ಶ್ರೇಯಸ್ಸು ಮತ್ತು ದೇವತಾನುಗ್ರಹ ಸದಾ ಕಾಲ ಇರುತ್ತದೆ. ಸಂಪ್ರದಾಯದ ಆಚರಣೆ, ಅನುಷ್ಠಾನದಲ್ಲಿ ಕಿಂಚಿತ್ತೂ ಸಂಕೋಚ ಯಾರಿಗೂ ಇರಬಾರದು. ನಮ್ಮ ಸಂಪ್ರದಾಯವೇ ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭ ಆವಳಮಠದ ಪರವಾಗಿ ಶ್ರೀಗಳಿಗೆ ಫಲ ಪುಷ್ಪ ಕಾಣಿಕೆಯನ್ನು ಪ್ರದಾನಿಸಲಾಯಿತು. ಡಾ. ಶ್ರೀಪತಿ ಕಜಂಪಾಡಿ ಸ್ವಾಗತ, ಅಭಿವಂದನೆ ಸಹಿತ ಕೃತಜ್ಞತಾ ನುಡಿಗಳನ್ನಾಡಿದರು. ಆಡಳಿತ ಮೊಕ್ತೇಸರ ಲಕ್ಷ್ಮೀನಾರಾಯಣ ಭಟ್ ಆವಳಮಠ, ಸೂರ್ಯನಾರಾಯಣ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ವೇದಘೋಷದ ಮೂಲಕ ಯತಿಗಳಿಗೆ ಸ್ವಾಗತ ನೀಡಲಾಯಿತು. ಅನುರಾಧಾ ಅರುಣ್ ಕುಮಾರ್ ಪ್ರಾರ್ಥನಾ ಗೀತೆ ಹಾಡಿದರು. ವಿವೇಕ ಆದಿತ್ಯ ಕಾರ್ಯಕ್ರಮ ನಿರೂಪಿಸಿದರು. ಆವಳಮಠ ಪರಿಸರಕ್ಕೆ ಆಗಮಿಸಿದ ಯತಿವರ್ಯರನ್ನು ವಾದ್ಯ, ವೇದಘೋಷ, ಪೂರ್ಣಕುಂಭದೊಂದಿಗೆ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದಂಗವಾಗಿ ಸ್ಥಳೀಯ ಕಲಾವಿದರಿಂದ ಕುಣಿತ ಭಜನೆ ನಡೆಯಿತು. ಧೂಳಿಪಾದ ಪೂಜೆಯ ನಂತರ ದೇಗುಲ ಪ್ರವೇಶಿಸಿದ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರು ದೇವಿಗೆ ಮಂಗಳಾರತಿ ನೆರವೇರಿಸಿದರು. ಸಭಾ ಕಾರ್ಯಕ್ರಮದ ನಂತರ ಶ್ರೀ ಚಂದ್ರಮೌಳೀಶ್ವರ ದೇವರ ಪೂಜೆ, ಯತಿಗಳಿಗೆ ಸದ್ಭಕ್ತರಿಂದ ಫಲ ಪುಷ್ಪ ಸಮರ್ಪಣೆ ಮತ್ತು ಶ್ರೀ ಶಾರದಾ ಪೂಜೆ, ಪಾದುಕಾಪೂಜೆ ನೆರವೇರಿತು.