ನವದೆಹಲಿ: 'ಬಿಜೆಪಿಯು ಕಚ್ಚತೀವು ದ್ವೀಪವನ್ನು ಲೋಕಸಭಾ ಚುನಾವಣೆಯ ವಿಚಾರವನ್ನಾಗಿಸಿದ್ದು, ಇದು ಭಾರತ ಮತ್ತು ಶ್ರೀಲಂಕಾ ನಡುವಿನ ಬಾಂಧವ್ಯದ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ಕಡೆಗಣಿಸಲಾಗಿದೆ' ಎಂದು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಗುರುವಾರ ಆರೋಪಿಸಿದರು.

'ಪ್ರಧಾನಿ ಅವರನ್ನು ಹೊರತುಪಡಿಸಿ ಈ ವಿಚಾರದ ಬಗ್ಗೆ ಬೇರೆ ಯಾರು ಮಾತನಾಡದಿರುವುದು ನಿರಾಶೆ ಉಂಟುಮಾಡಿದೆ. ಕಚ್ಚತೀವು ಅಂತರರಾಷ್ಟ್ರೀಯ ಸಾಗರದ ಗಡಿಯಲ್ಲಿ ಶ್ರೀಲಂಕಾದ ಕಡೆಗೆ ಬರುವ ದ್ವೀಪವಾಗಿತ್ತು ಮತ್ತು ಅದು ಆ ದೇಶದ ಪಾಲಾಗಿದೆ' ಎಂದು ಹೇಳಿದರು.
'ಈ ವಿಚಾರವನ್ನು ಮುನ್ನೆಲೆಗೆ ತಂದಿರುವುದರಿಂದ, ಎರಡೂ ದೇಶಗಳ ನಡುವಿನ ಸಂಬಂಧ ಹದಗೆಡಲಿದೆ. ನೀವು ಈ ದ್ವೀಪವನ್ನು ಮರಳಿ ಪಡೆಯಲು ಸೇನಾಪಡೆಯನ್ನು ಕಳುಹಿಸುತ್ತಿರೋ' ಎಂದೂ ಅವರು ಪ್ರಶ್ನಿಸಿದರು.
'ಇದು ಚುನಾವಣಾ ವಿಚಾರವಲ್ಲದೆ ಬೇರೇನೂ ಅಲ್ಲ' ಎಂದು ಹೇಳಿದರು.
'ಚುನಾವಣಾ ಬಾಂಡ್ ದೊಡ್ಡ ಹಗರಣ':
ಚುನಾವಣಾ ಬಾಂಡ್ ದೊಡ್ಡ ಹಗರಣವಾಗಿದೆ ಮತ್ತು ನೋಟು ರದ್ದತಿಯು ಕಪ್ಪು ಹಣವನ್ನು 'ಬಿಳಿ'ಯಾಗಿಸುವ ಮಾರ್ಗವಾಗಿತ್ತು ಎಂದು ಯಶವಂತ ಸಿನ್ಹಾ ಆರೋಪಿಸಿದರು.
ಕೇಂದ್ರದ ಬಿಜೆಪಿ ಸರ್ಕಾರವು ಭ್ರಷ್ಟಾಚಾರವನ್ನು ಮರೆಮಾಚಲು ಗೋಪ್ಯತೆಯನ್ನು ಹೊದಿಕೆಯಂತೆ ಬಳಸುತ್ತಿದೆ ಎಂದು 'ಪಿಟಿಐ' ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.