ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಅಮೆಜಾನ್ (Amazon) ವಿಶೇಷ ಸೇಲ್‌ಗಳನ್ನು ಆಗಾಗ್ಗೆ ಯೋಜಿಸಿ ಅಗ್ಗದ ದರದಲ್ಲಿ ಪ್ರೊಡಕ್ಟ್‌ಗಳನ್ನು ಸೇಲ್ ಮಾಡುತ್ತಿರುತ್ತದೆ. ಆದರೆ, ಇನ್ಮುಂದೆ ಯಾವಾಗಲೂ ಸಹ ಈ ವಿಭಾಗದಲ್ಲಿ ಅಗ್ಗದ ಬೆಲೆಯಲ್ಲಿ ವಸ್ತುಗಳನ್ನು ಖರೀದಿ ಮಾಡಬಹುದು.
ಹೌದು, ಅಮೆಜಾನ್ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ತಂತ್ರಗಳನ್ನು ಮಾಡುತ್ತಲೇ ಇರುತ್ತದೆ. ಈ ನಡುವೆ ಜನರಿಗೆ ಅಗ್ಗದ ದರದಲ್ಲಿ ವಸ್ತುಗಳನ್ನು ಪರಿಚಯಿಸುವ ಉದ್ದೇಶದಿಂದ ಹೊಸ ಪ್ಲಾಟ್‌ಫಾರ್ಮ್ ಪರಿಚಯಿಸಿದೆ. ಇದರಲ್ಲಿ ನೀವು 600 ರೂ.ಗಳ ಒಳಗೆ ಫ್ಯಾಶನ್ ಉತ್ಪನ್ನಗಳನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಏನಿದು ಹೊಸ ಸೌಲಭ್ಯ?, ಈ ವಿಭಾಗದಲ್ಲಿ ಖರೀದಿ ಮಾಡಲು ಏನು ಮಾಡಬೇಕು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
ಅಮೆಜಾನ್ ಬಜಾರ್: ಈ ಬಜಾರ್ ಸೌಲಭ್ಯವನ್ನು ಅಮೆಜಾನ್ (Amazon Bazaar) ಪರಿಚಯಿಸಿದ್ದು, ಗ್ರಾಹಕರಿಗೆ ಕೈಗೆಟುಕುವ ಮತ್ತು ವೈವಿಧ್ಯಮಯ ಉತ್ಪನ್ನಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ. ಈ ಮೂಲಕ ಕೈಗೆಟುಕುವ ಉತ್ಪನ್ನಗಳ ಮಾರಾಟಕ್ಕೆ ಹೆಸರುವಾಸಿಯಾದ ಮೀಶೋವನ್ನು ಎದುರಿಸಲು ಮುಂದಾಗಿದೆ. ಅಂದರೆ 600ರೂ.ಗಳಿಗಿಂತ ಕ್ಕಿಂತ ಕಡಿಮೆ ಬೆಲೆಯ ಉತ್ಪನ್ನಗಳನ್ನು ಇಲ್ಲಿ ಸೇಲ್ ಮಾಡಲಾಗುತ್ತದೆ.
ಇನ್ನು ಬಳಕೆದಾರರು ಬಜಾರ್ ಅನ್ನೋ ಹೊಸ ಆಪ್ ಮೂಲಕ ಈ ಸೇವೆ ಪಡೆಯಬೇಕು ಎಂಬುದೇನು ಇಲ್ಲ. ಬದಲಾಗಿ ನೀವು ಅಮೆಜಾನ್ ಆಪ್ ಮೂಲಕವೇ ಈ ಸೇವೆ ಪಡೆಯಬಹುದಾಗಿದೆ. ಈ ನಡುವೆ ಅಮೆಜಾನ್ ವಕ್ತಾರರು ಪ್ರತಿಕ್ರಿಯೆ ನೀಡಿ, ನಮ್ಮ ಗ್ರಾಹಕರು ಮತ್ತು ಥರ್ಡ್-ಪಾರ್ಟಿ ಮಾರಾಟಗಾರರ ಪರವಾಗಿ ನಾವು ಹೂಡಿಕೆ ಮತ್ತು ಆವಿಷ್ಕಾರವನ್ನು ಮುಂದುವರಿಸುತ್ತೇವೆ ಹಾಗೆಯೇ ಆಮೆಜಾನ್‌ನಲ್ಲಿ ಅಮೆಜಾನ್ ಬಜಾರ್ ಸ್ಟೋರ್‌ಫ್ರಂಟ್ ಅನ್ನು ಪರಿಚಯಿಸಲು ಉತ್ಸುಕರಾಗಿದ್ದೇವೆ. ಅಲ್ಲಿ ಗ್ರಾಹಕರು ಮಾರಾಟಗಾರರಿಂದ ಪಟ್ಟಿ ಮಾಡಲಾದ ಅಲ್ಟ್ರಾ-ಕೈಗೆಟುಕುವ ಫ್ಯಾಷನ್ ಮತ್ತು ಗೃಹ ಉತ್ಪನ್ನಗಳನ್ನು ಖರೀದಿ ಮಾಡಬಹುದು ಎಂದಿದ್ದಾರೆ.
ಇನ್ನು ಈ ಸೇವೆ ಪಡೆಯಬೇಕು ಎಂದರೆ ನಿಮ್ಮ ಬಳಿ ಅಮೆಜಾನ್ ಆಪ್ ಇರಬೇಕು. ಇಲ್ಲವಾದರೆ ಈಗಲೇ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಿ. ನೀವು ಹೊಸ ಬಳಕೆದಾರರಾಗಿದ್ದರೆ ಆಪ್‌ನಲ್ಲಿ ಖಾತೆ ಓಪನ್ ಮಾಡಿ. ಇದೆಲ್ಲಾ ಆದ ಮೇಲೆ ಲಾಗ್ ಇನ್ ಮಾಡಿ. ಬಳಿಕ ಅಮೆಜಾನ್ ಆಪ್‌ನಲ್ಲಿನ ಹೋಮ್ ಸ್ಕ್ರೀನ್‌ನ ಮೇಲಿನ ಎಡ ಮೂಲೆಯಲ್ಲಿರುವ 'ಬಜಾರ್' ಐಕಾನ್ ಅನ್ನು ಕ್ಲಿಕ್ ಮಾಡಿ. ಇಲ್ಲಿ ಭಾರೀ ಅಗ್ಗದ ದರದಲ್ಲಿ ಹಲವಾರು ವಸ್ತುಗಳು ಕಾಣಿಸಿಕೊಳ್ಳಲಿದ್ದು, ಸುಲಭವಾಗಿ ಖರೀದಿ ಮಾಡಿ.
ಇದು ಹೇಗೆ ಕೆಲಸ ಮಾಡುತ್ತದೆ?: ಬಜಾರ್‌ನಿಂದ ಮಾಡುವ ಆರ್ಡರ್‌ಗಳು ಪ್ರೈಮ್ ಬಳಕೆದಾರರಿಗೆ 4-5 ದಿನಗಳಲ್ಲಿ ತಲುಪುತ್ತವೆ. ನೀವು ಪ್ರೈಮ್ ಅಲ್ಲದ ಬಳಕೆದಾರರಾಗಿದ್ದರೆ, ನಿಮ್ಮ ಉತ್ಪನ್ನಗಳನ್ನು ಸ್ವೀಕರಿಸಲು ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಅಂದರೆ ಈಗ ಮೀಶೋ ಹೇಗೆ ಮಾಡುತ್ತದೆಯೋ ಅದೇ ರೀತಿ ಇದೆ ಇದೂ ಸಹ.
ಮೀಶೋದಿಂದ ಅಗ್ಗದ ವಸ್ತುಗಳನ್ನು ಆರ್ಡರ್ ಮಾಡಿದ ಬಳಿಕ ಅವುಗಳು ನಿಮ್ಮ ಮನೆಗೆ ತಲುಪಲು 4-5 ದಿನಗಳು ಬೇಕಾಗುತ್ತದೆ. ಕೆಲವೊಮ್ಮೆ ವಾರಗಳನ್ನು ಸಹ ತೆಗೆದುಕೊಳ್ಳುತ್ತದೆ. ಉತ್ಪನ್ನಗಳನ್ನು ವೇಗವಾಗಿ ಪಡೆಯಲು ಯಾವುದೇ ಆಯ್ಕೆಗಳು ಇದರಲ್ಲಿ ಇಲ್ಲ. ಆದರೂ ಸಹ ಕೆಲವು ಬಾರಿ ನೀವು ಆರ್ಡರ್‌ಗಳನ್ನು ಎರಡು ಮೂರು ದಿನಗಳಲ್ಲೇ ವಿತರಿಸುವುದನ್ನು ನೀವು ನೋಡಿರಬಹುದು.
ಅದೇನೇ ಇರಲಿ ಭಾರತೀಯರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡಿರುವ ಅಮೆಜಾನ್ ಈ ವಿಶೇಷ ಪ್ಲಾಟ್‌ಫಾರ್ಮ್ ಅನ್ನು ಇದೀಗ ಲಾಂಚ್ ಮಾಡಿದೆ. ಇದರಿಂದ ನಮಗೇಕಪ್ಪ ಇ- ಕಾಮರ್ಸ್ ಸಹವಾಸ ಎನ್ನುವವರು ಸಹ ಒಮ್ಮೆ ಇಣುಕಿ ನೋಡುವಂತೆ ಆಗಿದೆ. ಆದರೆ, ಮೀಶೋಗೆ ಇದರಿಂದ ಯಾವ ರೀತಿಯ ಪೆಟ್ಟು ಬೀಳಲಿದೆ ಅನ್ನೋದನ್ನು ಕಾದು ನೋಡಬೇಕು.