ತಿರುವನಂತಪುರ: ಬಜೆಟ್ ನಲ್ಲಿ ಹೆಚ್ಚಿಸಿರುವ ಗ್ಯಾಲನೇಜ್ ಶುಲ್ಕವನ್ನು ಹಿಂಪಡೆಯದಿದ್ದರೆ ಬೆವ್ಕೋ ಸಂಸ್ಥೆಗೆ ಭಾರೀ ನಷಟವಾಗಲಿದೆ ಎಂದು ಬೆವ್ಕೋ ಎಂಡಿ ಹೇಳಿದ್ದಾರೆ.
ಈ ಸಂಬಂಧ ಬೆವ್ಕೋ ಎಂಡಿ ಯೋಗೇಶ್ ಗುಪ್ತಾ ಅವರು ಅಬಕಾರಿ ಸಚಿವ ಎಂ.ಬಿ.ರಾಜೇಶ್ ಅವರಿಗೆ ಪತ್ರ ಹಸ್ತಾಂತರಿಸಿದ್ದಾರೆ. 300 ಕೋಟಿ ಹೆಚ್ಚುವರಿ ಆದಾಯ ಗಳಿಸುವ ಉದ್ದೇಶದಿಂದ ಬಜೆಟ್‍ನಲ್ಲಿ ಗ್ಯಾಲನೇಜ್ ಶುಲ್ಕವನ್ನು ತೀವ್ರವಾಗಿ ಹೆಚ್ಚಿಸಲಾಗಿದೆ. ಇದನ್ನು ಕಡಮೆ ಮಾಡದಿದ್ದಲ್ಲಿ ಬೆವ್ಕೋ ಉಳಿಸಬೇಕಾದರೆ ಮತ್ತೆ ಮದ್ಯದ ಬೆಲೆ ಏರಿಸಬೇಕಾಗುತ್ತದೆ.
ಗ್ಯಾಲನೇಜ್ ಶುಲ್ಕವು ಮದ್ಯವನ್ನು ಗೋದಾಮುಗಳಿಂದ ಔಟ್‍ಲೆಟ್‍ಗಳಿಗೆ ಸ್ಥಳಾಂತರಿಸಿದಾಗ ಬೆವ್ಕೋ ಸರ್ಕಾರಕ್ಕೆ ಪಾವತಿಸುವ ತೆರಿಗೆಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಲೀಟರ್‍ಗೆ 5 ಪೈಸೆ ಇದ್ದಿರುವುದು ಇಂದಿನಿಂದ 10 ರೂಪಾಯಿಗೆ ಏರಿಕೆಯಾಗಿದೆ. ಈ ಮೂಲಕ ಬೆವ್ಕೋಗೆ 300 ಕೋಟಿ ನಷ್ಟ ಉಂಟಾಗಲಿದೆ ಎಂದು ಎಂಡಿ ಸರ್ಕಾರಕ್ಕೆ ಮಾಹಿತಿ ನೀಡಿದರು. ಬೆವ್ಕೋ ಒಂದು ಆರ್ಥಿಕ ವರ್ಷದಲ್ಲಿ ಗ್ಯಾಲನೇಜ್ ಶುಲ್ಕವಾಗಿ 1.25 ಕೋಟಿ ರೂ.ನೀಡಬೇಕಾಗುತ್ತದೆ. ಆದರೆ ಹೊಸ ದರ ಜಾರಿಯಿಂದ 300 ಕೋಟಿ ನಷ್ಟವಾಗಲಿದೆ.
ಬೆವ್ಕೋ ಗಳಿಸಿದ ಲಾಭದಲ್ಲಿ ಸಂಬಳ ಮತ್ತು ಇತರ ಸೌಲಭ್ಯಗಳನ್ನು ಪಾವತಿಸಲಾಗುತ್ತದೆ. ಲಾಭದ ಕುಸಿತವು ವೇತನದ ಮೇಲೂ ಪರಿಣಾಮ ಬೀರುತ್ತದೆ. ಸಂಸ್ಥೆ ಮುಂದುವರಿಸಬೇಕಾದರೆ, ಮದ್ಯದ ಬೆಲೆಯನ್ನು ಹೆಚ್ಚಿಸಬೇಕಾಗುತ್ತದೆ. ಹೆಚ್ಚುತ್ತಿರುವ ಬೆಲೆಗಳು ಮಾರಾಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎನ್ನಲಾಗಿದೆ.