ನವದೆಹಲಿ: ಭಾರತ ಲಕ್ಷದ್ವೀಪ ಪ್ರವಾಸೋಧ್ಯಮ ಉತ್ತೇಜನ ಕ್ರಮದ ಬಳಿಕ ನೆಲಕ್ಕಚ್ಚಿರುವ ತನ್ನ ಪ್ರವಾಸೋಧ್ಯಮ ಉತ್ತೇಜನಕ್ಕೆ ಮಾಲ್ಡೀವ್ಸ್ ಮುಂದಾಗಿದ್ದು, ಇದೀಗ ಭಾರತದಲ್ಲಿ ರೋಡ್ ಶೋ ನಡೆಸಲು ಸಜ್ಜಾಗಿದೆ.
ಹೌದು.. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಪ್ರವಾಸೋದ್ಯಮಕ್ಕೆ (Lakshadweep) ಉತ್ತೇಜನ ನೀಡಬೇಕು ಎಂದಿದ್ದಕ್ಕೇ ತಗಾದೆ ತೆಗೆದಿದ್ದ ಮಾಲ್ಡೀವ್ಸ್ ಇದೀಗ ತನ್ನ ಪ್ರವಾಸೋಧ್ಯಮ ಉತ್ತೇಜನಕ್ಕೆ ಭಾರತದಲ್ಲಿ ರೋಡ್ ಶೋ ನಡೆಸುವ ಯೋಜನೆ ಹಾಕುತ್ತಿದೆ. ಭಾರತದ ವಿರುದ್ಧದ ಟೀಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪ ಭೇಟಿ ಬಳಿಕ ಮಾಲ್ಡೀವ್ಸ್ ಪ್ರವಾಸೋಧ್ಯಮ ನೆಲಕಚ್ಚಿದ್ದು, ಗಂಭೀರ ಪ್ರವಾಸಿಗರ ಕೊರತೆ ಎದುರಿಸುತ್ತಿದೆ.
ಇದರಿಂದ ಪ್ರವಾಸೋಧ್ಯಮವನ್ನೇ ನೆಚ್ಚಿಕೊಂಡಿರುವ ಆ ದೇಶದ ಆದಾಯ ಕೂಡ ಕುಸಿತವಾಗಿದ್ದು, ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಶುರುವಾದ ಕಾರಣ ಆ ದೇಶಕ್ಕೆ ತೆರಳುವವರ ಸಂಖ್ಯೆ ಭಾರಿ ಕುಸಿದಿದೆ. ಹಾಗಾಗಿ, ಭಾರತದ ಪ್ರವಾಸಿಗರನ್ನು ಸೆಳೆಯಲು ಮಾಲ್ಡೀವ್ಸ್ ಪ್ರವಾಸೋದ್ಯಮ ಸಂಘಟನೆಯು ಹೊಸ ಯೋಜನೆ ರೂಪಿಸಿದೆ. ಭಾರತದ ಪ್ರಮುಖ ನಗರಗಳಲ್ಲಿ ರೋಡ್ ಶೋ ಆಯೋಜಿಸಲು ತೀರ್ಮಾನಿಸಲಾಗಿದೆ.
ಜನವರಿ 8ರಂದು ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ಮಾಲ್ಡೀವ್ಸ್ ಅಸೋಸಿಯೇಷನ್ ಆಫ್ ಟ್ರಾವೆಲ್ ಏಜೆಂಟ್ಸ್ & ಟೂರ್ ಆಪರೇಟರ್ಸ್ (MATATO) ಸಂಘಟನೆಯು ಭಾರತೀಯ ಹೈಕಮಿಷನರ್‌ರನ್ನು ಭೇಟಿಯಾಗಿದ್ದು, ಭಾರತದಲ್ಲಿ ರೋಡ್ ಶೋ ನಡೆಸುವ ಕುರಿತು ಚರ್ಚಿಸಿದ್ದಾರೆ. ಭಾರತದ ಪ್ರಮುಖ ನಗರಗಳಲ್ಲಿ ರೋಡ್ ಶೋಗಳನ್ನು ಆಯೋಜಿಸಿ, ಮತ್ತೆ ಮಾಲ್ಡೀವ್ಸ್‌ಗೆ ಭಾರತದ ಪ್ರವಾಸಿಗರನ್ನು ಸೆಳೆಯುವುದು ಇದರ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.
ರೋಡ್ ಶೋಗೆ ಸರ್ಕಾರದ ಅನುಮತಿ?
ಇನ್ನು ಮಾಲ್ಡೀವ್ಸ್ ನ ರೋಡ್ ಶೋ ಕೇಂದ್ರ ಸರ್ಕಾರ ಅನುಮತಿ ನೀಡಿದೆಯೇ ಇಲ್ಲವೇ ಎಂಬ ವಿಚಾರ ತಿಳಿದಿಲ್ಲ. ಆದರೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರ ತೀವ್ರ ಕುತೂಹಲ ಕೆರಳಿಸಿದೆ.
ಭಾರತವನ್ನು ಟೀಕಿಸಿದ್ದ ಮಾಲ್ಡೀವ್ಸ್ ಸಚಿವರು
ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಮಾಲ್ಡೀವ್ಸ್‌ನಲ್ಲಿಯೇ ಟೀಕೆಗಳು ವ್ಯಕ್ತವಾಗಿದ್ದವು ಮಾಲ್ಡೀವ್ಸ್ ಸಂಸದರು ಭಾರತದ ಕ್ಷಮೆಯಾಚಿಸಿದ್ದರು. ಭಾರತದಲ್ಲಂತೂ ಮಾಲ್ಡೀವ್ಸ್ ವಿರುದ್ಧ ಅಭಿಯಾನವೇ ಶುರುವಾಗಿತ್ತು. ನೂರಾರು ಸೆಲೆಬ್ರಿಟಿಗಳು, ನಟರು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಇದಾದ ಬಳಿಕ ಮಾಲ್ಡೀವ್ಸ್ ಟ್ರಿಪ್ ಕ್ಯಾನ್ಸಲ್ ಮಾಡಿಕೊಂಡಿದ್ದರು.
ಭಾರತೀಯ ಪ್ರವಾಸಿಗರ ಕುಸಿತ
ಮಾಲ್ಡೀವ್ಸ್‌ಗೆ ತೆರಳುವ ಪ್ರವಾಸಿಗರಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚಿತ್ತು. ಆದರೆ, ಬಾಯ್ಕಾಟ್ ಅಭಿಯಾನದ ಬಳಿಕ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, 2024ರ ಏಪ್ರಿಲ್ 10ರವರೆಗೆ ಮಾಲ್ಡೀವ್ಸ್‌ಗೆ 6.63 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, ಚೀನಾದ 71 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದಾರೆ.
2023ರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. 2023ರಲ್ಲಿ ಭಾರತದಿಂದ ಮಾಲ್ಡೀವ್ಸ್‌ಗೆ 2,09,198 ಜನ ಭೇಟಿ ನೀಡಿದರೆ, ರಷ್ಯಾದಿಂದ 2,09,146 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇನ್ನು, ಚೀನಾದಿಂದ ಕಳೆದ ವರ್ಷ 1,87,118 ಮಂದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ.
ಇದೇ ಕಾರಣಕ್ಕಾಗಿಯೇ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಸಂಘವು, ಭಾರತದ ವಿರುದ್ಧ ಸಚಿವರು ನೀಡಿದ ಉದ್ಧಟತನದ ಹೇಳಿಕೆಯನ್ನು ಖಂಡಿಸಿದ್ದು ಮಾತ್ರವಲ್ಲದೇ ಭಾರತದ ಮನವೊಲಿಸಲು ಯತ್ನಿಸುತ್ತಿದೆ.