ನವದೆಹಲಿ: ರಾಜಸ್ಥಾನದ ಬನ್ಸ್‌ವಾರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದ್ವೇಷ ಭಾಷಣ ಮಾಡಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ನೀಡಲಾಗಿದ್ದ ದೂರಿನ ಸಂಬಂಧ, ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಚುನಾವಣಾ ಆಯೋಗವು ನೋಟಿಸ್ ಜಾರಿ ಮಾಡಿದೆ.
ಇದರ ಜೊತೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಚುನಾವಣಾ ಆಯೋಗ ನೋಟಿಸ್ ನೀಡಿದ್ದು, ತಾವು ಹಾಗೂ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಬಗ್ಗೆ ಸ್ಪಷ್ಟನೆ ಕೇಳಿದೆ.
ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್, ಸಿಪಿಐ, ಸಿಪಿಐ(ಎಂಎಲ್) ಹಾಗೂ ನಾಗರಿಕ ಸೇವಾ ಸಂಸ್ಥೆಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು.
ಈ ಬಗ್ಗೆ ಸೋಮವಾರದೊಳಗೆ ಸ್ಪಷ್ಟನೆ ನೀಡಬೇಕು ಎಂದು ನಡ್ಡಾ ಅವರಿಗೆ ನೀಡಿದ ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ರಾಜಕೀಯ ಪ್ರಚಾರದ ವೇಳೆ ಉನ್ನತ ಗುಣಮಟ್ಟ ಕಾಪಾಡಲು ಹಾಗೂ ಮಾದರಿ ನೀತಿ ಸಂಹಿತೆಯನ್ನು ಪಾಲಿಸಲು ನಿಮ್ಮ ಸ್ಟಾರ್ ಪ್ರಚಾರಕರಿಗೆ ಸೂಚಿಸಬೇಕು. ಉನ್ನತ ಸ್ಥಾನದಲ್ಲಿ ಇರುವವರು ಮಾಡುವ ಭಾಷಣಗಳು ಗಂಭೀರ ಪರಿಣಾಮ ಬೀರುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.
ಯಾವುದೇ ಪ್ರಧಾನಿಯ ವಿರುದ್ಧ ಸಲ್ಲಿಸಲಾದ ದೂರನ್ನು ಚುನಾವಣಾ ಆಯೋಗವು ಪರಿಗಣಿಸಿರುವುದು ಇದೇ ಮೊದಲು ಎಂದು ಅಧಿಕಾರಿಗಳು ಹೇಳಿದ್ದಾರೆ.
ಜನರ ಸಂಪತ್ತನ್ನು ಮುಸ್ಲಿಮರಿಗೆ ಹಂಚಿಕೆ ಮಾಡಬೇಕು ಎಂದು ಕಾಂಗ್ರೆಸ್ ಬಯಸಿದೆ. ಮಹಿಳೆಯರ ಮಂಗಳಸೂತ್ರವನ್ನೂ ಕಾಂಗ್ರೆಸ್ ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರ ವಿರುದ್ಧ ದೂರುಗಳು ದಾಖಲಾಗಿದ್ದವು.