ಜೆರುಸಲೆಂ: ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ಪ್ರತಿಯುತ್ತರ ನೀಡಲು ಇಸ್ರೇಲ್ ನಿರ್ಧರಿಸಿದೆ ಎಂದು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಕ್ಯಾಮರೂನ್ ಬುಧವಾರ ತಿಳಿಸಿದ್ದಾರೆ.
ತನ್ನ ಮೇಲೆ ಚಿಕ್ಕ ದಾಳಿ ನಡೆದರೂ ಇಸ್ರೇಲ್ ದೊಡ್ಡಮಟ್ಟದ ಬೆಲೆ ತೆರಬೇಕಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ.
ಇರಾನ್‌ನ ಅನಿರೀಕ್ಷಿತ ದಾಳಿಗೆ ಯಾವಾಗ ಅಥವಾ ಹೇಗೆ ಎಂದು ತಿಳಿಸದೆಯೇ ಪ್ರತ್ಯುತ್ತರ ನೀಡುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿದೆ. ಇರಾನ್ ದಾಳಿಯನ್ನು ಹಿಮ್ಮೆಟ್ಟಿಸಲು ಸಹಾಯ ಮಾಡಿದ ಅಮೆರಿಕ, ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಇಸ್ರೇಲ್‌ನ ಮಿತ್ರರಾಷ್ಟ್ರಗಳು ಯುದ್ಧ ಪರಿಸ್ಥಿತಿ ಪ್ರಕೋಪಕ್ಕೆ ಹೋಗದಂತೆ ತಡೆಯಲು ಯತ್ನಿಸುತ್ತಿವೆ.
ಈ ಮಧ್ಯೆ, ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಯಾವುದೇ ಪ್ರತೀಕಾರ ನೀಡಿದರೆ ಪರಿಸ್ಥಿತಿ ಸರಿಯಾಗಿ ಇರಲಾರದು ಎಂದು ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದಾರೆ. ಶನಿವಾರ ನಡೆಸಿದ ದಾಳಿಯು ಸೀಮಿತವಾಗಿದೆ ಮತ್ತು ಇರಾನ್ ದೊಡ್ಡ ದಾಳಿಯನ್ನು ನಡೆಸಲು ಬಯಸಿದರೆ, 'ಇಸ್ರೇಲ್ ಆಡಳಿತದಲ್ಲಿ ಏನೂ ಉಳಿಯುವುದಿಲ್ಲ' ಎಂದು ರೈಸಿ ಕಟುವಾಗಿ ಹೇಳಿದ್ದಾರೆ.
ಡೇವಿಡ್ ಕ್ಯಾಮರೂನ್ ಮತ್ತು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೆಯರ್‌ಬಾಕ್ ಇಬ್ಬರೂ ಬುಧವಾರ ಉನ್ನತ ಅಧಿಕಾರಿಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ಇಸ್ರೇಲ್‌ಗೆ ಹೋಗಿದ್ದು, ಯುದ್ಧದ ವಿಷಯದಲ್ಲಿ ಸಂಯಮದಿಂದ ಇರುವಂತೆ ಒತ್ತಾಯಿಸಿದ್ದಾರೆ.
ಇಸ್ರೇಲ್‌ಗೆ ತಾವು ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ. ಹೆಚ್ಚು ಹಿಂಸಾಚಾರಗಳು ಆಗದಂತೆ ಹೇಗೆ ತಡೆಯಬಹುದು ಎಂದು ಚರ್ಚಿಸಿದ್ದು, ಇರಾನ್ ಮೇಲೆ ಮತ್ತಷ್ಟು ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಹೇರಲು ಒತ್ತಾಯಿಸುವುದಾಗಿ ಇಬ್ಬರೂ ಹೇಳಿದ್ದಾರೆ.