ನವದೆಹಲಿ: ಸಂಸತ್ ಭದ್ರತಾ ಲೋಪ ಪ್ರಕರಣವನ್ನು ಪೂರ್ಣಗೊಳಿಸಲು ದೆಹಲಿ ಪೊಲೀಸರಿಗೆ ದೆಹಲಿ ನ್ಯಾಯಾಲಯ ಒಂದು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ.
ಕಾಲಾವಕಾಶ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರದೀಪ್ ಕೌರ್, ಮೇ 25 ರೊಳಗೆ ತನಿಖೆ ಪೂರ್ಣಗೊಳಿಸಿ ಚಾರ್ಜ್‌ಶೀಟ್ ಸಲ್ಲಿಸುವಂತೆ ಸೂಚಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸಾಕ್ಷಿಗಳನ್ನು ಪರೀಕ್ಷೆಗೆ ಒಳಪಡಿಸಬೇಕಿದೆ. ಅಲ್ಲದೇ ಕೆಲ ವರದಿಗಳಿಗಾಗಿಯೂ ಕಾಯಲಾಗುತ್ತಿದೆ. ಇದಕ್ಕಾಗಿ ಕನಿಷ್ಠ 45 ದಿನಗಳಾದರೂ ಬೇಕು ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಮನವಿ ಮಾಡಿದ್ದರು.
ಸಂಸತ್ ಮೇಲಿನ ದಾಳಿಯ 22ನೇ ವರ್ಷಾಚರಣೆಯ ದಿನವೇ ಭಾರಿ ಭದ್ರತಾ ಲೋಪದ ಘಟನೆಗೆ ಲೋಕಸಭೆ ಸಾಕ್ಷಿಯಾಗಿತ್ತು. 2023 ಡಿಸೆಂಬರ್ 13ರಂದು ಕಲಾಪ ನಡೆಯುತ್ತಿರುವಾಗಲೇ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ. ಹೆಸರಿನ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗುತ್ತಾ 'ಸ್ಮೋಕ್ ಕ್ಯಾನ್' ಹಾರಿಸಿ ದಾಂದಲೆ ಎಬ್ಬಿಸಿದ್ದರು. ಅಮೋಲ್ ಶಿಂಧೆ ಮತ್ತು ನೀಲಂ ಆಜಾದ್ ಎಂಬ ಇನ್ನಿಬ್ಬರು ಸಂಸತ್ತಿನ ಹೊರಗಡೆ ಪ್ರತಿಭಟನೆ ನಡೆಸಿದ್ದರು.