ಹೊಶಂಗಬಾದ್: 'ಇಂಡಿ' ಬಣದ ಪಕ್ಷವೊಂದು ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಪರವಾಗಿದ್ದು, ಅವರು ದೇಶವನ್ನು ರಕ್ಷಿಸಲಾರರು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಮಧ್ಯಪ್ರದೇಶದ ಪಿಪಾರಿಯಾ ಪಟ್ದಣದ ಹೊಶಂಗಬಾದ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸದಾ ಅವಮಾನಿಸಿದೆ. ಬಿಜೆಪಿ ಸರ್ಕಾರ ಅವರನ್ನು ಗೌರವಿಸಿದೆ ಎಂದು ಹೇಳಿದ್ದಾರೆ.
ಸಿಪಿಐ(ಎಂ) ತನ್ನ ಪ್ರಣಾಳಿಕೆಯಲ್ಲಿ ಪರಮಾಣು ನಿಶ್ಯಸ್ತ್ರೀಕರಣದ ಬಗ್ಗೆ ಪ್ರಸ್ತಾಪಿಸಿರುವುದನ್ನು ಪಕ್ಷದ ಹೆಸರು ಹೇಳದೆ ಉಲ್ಲೇಖಿಸಿದ ಮೋದಿ, ವೈರಿ ರಾಷ್ಟ್ರಗಳು ಅಪಾರ ಪ್ರಮಾಣದ ಅಣ್ವಸ್ತ್ರ ಹೊಂದಿರುವ ಸದ್ಯದ ಪರಿಸ್ಥಿತಿಯಲ್ಲಿ ದೇಶಕ್ಕೆ ಅಣ್ವಸ್ತ್ರಗಳು ಬೇಡವೇ ಎಂದು ಪ್ರಶ್ನಿಸಿದರು.
'ಇಂಡಿ ಮೈತ್ರಿಕೂಟದ ಪಕ್ಷವೊಂದರ ಪ್ರಣಾಳಿಕೆಯಲ್ಲಿ ಹಲವು ಅಪಾಯಕಾರಿ ಭರವಸೆಗಳನ್ನು ನೀಡಲಾಗಿದೆ. ದೇಶವನ್ನು ಅಣ್ವಸ್ತ್ರ ಮುಕ್ತಗೊಳಿಸುವುದಾಗಿ ಆ ಪಕ್ಷ ಹೇಳಿದೆ' ಎಂದು ಮೋದಿ ಗುಡುಗಿದ್ದಾರೆ.
'ನಮ್ಮ ದೇಶವನ್ನು ಕಾಪಾಡಿಕೊಳ್ಳಲು ನಾವು ಅಣ್ವಸ್ತ್ರಗಳನ್ನು ಹೊಂದಿರಲೇಬೇಕು. ಅದನ್ನು ಬಿಟ್ಟು ಅವರು ದೇಶವನ್ನು ಹೇಗೆ ಕಾಪಾಡುತ್ತಾರೆ' ಎಂದು ಪ್ರಶ್ನಿಸಿದರು.
ಒಂದೇ ಏಟಿಗೆ ಬಡತನ ನಿರ್ಮೂಲನೆ ಮಾಡುವುದಾಗಿ ಎಂಬ ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಕುಟುಕಿದ ಮೋದಿ, ಕಾಂಗ್ರೆಸ್‌ನ ರಾಜಕುಮಾರ ಅಂತಹ ಹೇಳಿಕೆ ಕೊಟ್ಟಾಗ ಜನ ನಗುತ್ತಾರೆ. ಅವರನ್ನು ದೇಶದ ಜನ ಗಂಭೀರವಾಗಿ ತೆಗೆದುಕೊಂಡೇ ಇಲ್ಲ ಎಂದಿದ್ದಾರೆ.
ಅವರ ಅಜ್ಜಿ(ಇಂದಿರಾ ಗಾಂಧಿ) ಸಹ ಗರೀಬಿ ಹಠಾವೋ ಎಂಬ ಘೋಷಣೆ ಮಾಡಿದ್ದರು. ಜನ ಅದನ್ನೂ ನೋಡಿದ್ದಾರೆ ಎಂದು ಮೋದಿ ವ್ಯಂಗ್ಯ ಮಾಡಿದರು.