ಕಾಸರಗೋಡು: ಕೆ.ಎಸ್.ಟಿ.ಪಿ. ರಾಜ್ಯ ಹೆದ್ದಾರಿಯ ಬೇಕಲ್ ಜಂಕ್ಷನ್‍ನಿಂದ ಪೆರಿಯ ರಸ್ತೆಯ ವರೆಗೆ ಬೀದಿ ದೀಪಗಳಿಲ್ಲದೆ ಬೇಕಲ ಪ್ರವಾಸಿ ಕೇಂದ್ರಕ್ಕೆ ಬರುವ ಪ್ರವಾಸಿಗರು ಸಂಕಷ್ಟಕ್ಕೊಳಗಾಗುತ್ತಿದ್ದಾರೆ.
ದಿನನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುವ ಇತಿಹಾಸ ಪ್ರಸಿದ್ಧ ಬೇಕಲ ಕೋಟೆ ಹಾಗು ಬೇಕಲ್ ಬೀಚ್‍ಗೆ ಸಂಚರಿಸಲು ಕಷ್ಟವಾಗುತ್ತಿದೆ. ಬೇಕಲ ಬೀಚ್ ಪಾರ್ಕ್‍ಗೆ ಸಂದರ್ಶಕರಿಗೆ ರಾತ್ರಿ 9 ಗಂಟೆಯ ವರೆಗೆ ವಿಸ್ತರಿಸಿದ್ದರಿಂದಾಗಿ ರಾತ್ರಿ ಬಸ್ ನಿಲ್ದಾಣದ ವರೆಗೆ ನಡೆದು ಹೋಗುವ ಪ್ರವಾಸಿಗಳು ಕತ್ತಲೆಯಲ್ಲಿ ತಡಕಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಗ್ರಾಮಗಳಲ್ಲೂ ಬೀದಿ ದೀಪಗಳು ಬೆಳಗುತ್ತಿರುವಾಗ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿರುವ ಬೇಕಲ ಕೋಟೆ ಪರಿಸರದಲ್ಲಿ ಬೀದಿ ದೀಪಗಳು ಬೆಳಗದಿರುವುದು ಸಮಸ್ಯೆಯಾಗಿ ಕಾಡಿದೆ.
ಪ್ರಸ್ತುತ ಬೇಸಿಗೆ ರಜಾ ಅವಧಿಯಾಗಿರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಿದೆ. ಆದರೆ, ಪ್ರವಾಸಿಗರನ್ನು ಆಕರ್ಷಿಸಲಷ್ಟೇ ಅಧಿಕೃತರು ಆಸಕ್ತಿ ವಹಿಸುತ್ತಿದ್ದು, ಪ್ರಾಥಮಿಕ ಅಗತ್ಯಗಳನ್ನು ಪೂರೈಸಲು ಆಸಕ್ತಿವಹಿಸುತ್ತಿಲ್ಲ ಎಂಬ ದೂರುಗಳೂ ಇವೆ. ಲಭಿಸುವ ಆದಾಯದ ಬಹುಪಾಲು ನಿರ್ವಹಣಾ ಏಜೆನ್ಸಿಗೆ ತಗಲುವುದರಿಂದ ಮೂಲಸೌಕರ್ಯ ಅಭಿವೃದ್ದಿಪಡಿಸಲು ಮೊತ್ತ ಲಭಿಸುತ್ತಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಅಲ್ಲದೆ ಬೀದಿದೀಪ ನಿರ್ವಹಣೆ ಸ್ಥಳೀಯಾಡಳಿತÀಕ್ಕೆ ಸೇರಿದ್ದಾಗಿದ್ದು, ವಿದ್ಯಿತ್ ಬಿಲ್ ಪಾವತಿಸಲೂ ಸಾಧ್ಯವಾಗದ ಸ್ಥಿತಿಯಿಂದ ವಿದ್ಯುತ್ ದೀಪಗಳು ಬೆಳಗುತ್ತಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಪಂಚಾಯತಿ ಅಧಿಕೃತರು ತಿಳಿಸಿದ್ದಾರೆ.
ಇತರ ಕೇಂದ್ರಗಳ ನಿರ್ಲಕ್ಷ್ಯ:
ಜಿಲ್ಲೆಯಲ್ಲಿ ಪ್ರವಾಸಿ ಕೇಂದ್ರದ ಮೂಲಕ ಹೆಚ್ಚು ಆದಾಯಗಳಿಸಬಹುದಾದರೂ ಬೇಕಲಕೋಟೆ ಹಾಗೂ ಪಳ್ಳಿಕ್ಕೆರೆ ಬೀಚ್ ನ ಬೋಟಿಂಗ್ ಅಲ್ಲದೆ ಬೇರೆ ಕೇಂದ್ರಗಳನ್ನು ಅಭಿವೃದ್ದಿಪಡಿಸಲು ಅಧಿಕೃತರು ಮುಂದಾಗದಿರುವುದು ಆಡಳಿತ ಯಂತ್ರದ ವೈಫಲ್ಯವನ್ನು ತೋರಿಸುತ್ತಿದೆ. ಪುವ್ವಲ್ ಕೋಟೆ, ಆರಿಕ್ಕಾಡಿ ಕೋಟೆ, ಕಾಸರಗೋಡು ಕೋಟೆ, ಬಂದ್ಯೋಡು ಅಡ್ಕ ಕೋಟೆ, ಮಂಜೇಶ್ವರ ಗಿಳಿವಿಂಡು, ಬಂಗ್ರಮಂಜೇಶ್ವರದ ಜೈನ ಬಸದಿ, ಪೊಸಡಿಗುಂಪೆ, ಹೀಗೆ ಪಟ್ಟಿಮಾಡಿದರೆ ಸಾಕಷ್ಟಿರುವ ಪ್ರಧಾನ ಪ್ರಾಚೀನ ಕುರುಹುಗಳು ಅಭಿವೃದ್ದಿಗಾಗಿ ಮತ್ತು ಪ್ರವಾಸಿಗರ ಮುಕ್ತ ವೀಕ್ಷಣೆಗೆ ಕಾಯುತ್ತಿದೆ.
ಅಭಿಮತ:
ಬೇಕಲ ಪ್ರವಾಸಿಧಾಮಕ್ಕೆ ತೆರಳಲು ಬೆಳಕಿಲ್ಲದೆ ಕತ್ತಲಲ್ಲೇ ಅಲೆದಾಡಬೇಕಾದುದು ದುರ್ವಿಧಿ. ಆಗಾಗ ಭೇಟಿ ನೀಡುವ ತನಗೇ ಬೆಳಕಿಲ್ಲದೆ ಸಮಸ್ಯೆಯಾಗುತ್ತಿರುವುದರ ಮಧ್ಯೆ ಬೇರೆಡೆಗಳಿಂದ ಆಗಮಿಸುವವರಿಗೆ ಎಷ್ಟೊಂದು ಸಮಸ್ಯೆಯಾಗುತ್ತಿರಬೇಡ?. ಅಧಿಕೃತರಿಗೆ ಈ ಬಗ್ಗೆ ಹಲವು ಮನವಿಗಳನ್ನು ನೀಡಿದ್ದರೂ ವ್ಯವಸ್ಥೆ ಕಲ್ಪಿಸಿಲ್ಲ. ಕಾರಣವೂ ಅಸ್ಪಷ್ಟ. ಸ್ಥಳೀಯಾಡಳಿತಕ್ಕೆ ಕಷ್ಟವಾಗುವುದಾದರೆ, ಜಿಲ್ಲಾಡಳಿತವಾದರೂ ಪರಿಹಾರ ಕಲ್ಪಿಸಬೇಕು.
-ಮನೋಜ್ ಜಯನ್.ಬೇಕಲ್
ಸ್ಥಳೀಯ ನಿವಾಸಿ.ವಿದ್ಯಾರ್ಥಿ.