ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ಇತಿಹಾಸದಲ್ಲೇ ದಾಖಲೆಯ ಮೊತ್ತ ಖರ್ಚಾಗುತ್ತಿದೆ. ಜಗತ್ತಿನಲ್ಲೇ ಅತ್ಯಂತ ದುಬಾರಿ ವೆಚ್ಚದ ಚುನಾವಣೆ ಇದಾಗಿದೆ ಎಂಬ ದಾಖಲೆಯನ್ನೂ 2024 ರ ಚುನಾವಣೆ ಸೃಷ್ಟಿಸಿದೆ.
ಈ ಲೋಕಸಭಾ ಚುನಾವಣೆಗೆ ಅಂದಾಜು 1.35 ಲಕ್ಷ ಕೋಟಿ ರೂಪಾಯಿ ಖರ್ಚಾಗಲಿದ್ದು, 2019 ರಲ್ಲಿ ಆಗಿದ್ದ ವೆಚ್ಚಕ್ಕಿಂತಲೂ ಇದು ಎರಡುಪಟ್ಟು ದುಬಾರಿ ಎಂದು ವಿಶ್ಲೇಷಿಸಲಾಗುತ್ತಿದೆ.
ಸುಮಾರು 35 ವರ್ಷಗಳಿಂದ ಚುನಾವಣಾ ವೆಚ್ಚಗಳನ್ನು ವಿಶ್ಲೇಷಿಸುತ್ತಿರುವ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ (ಸಿಎಂಎಸ್) ನ ಮುಖ್ಯಸ್ಥರಾದ ಎನ್ ಭಾಸ್ಕರ ರಾವ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಸಮಗ್ರ ವೆಚ್ಚವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು, ಅಭ್ಯರ್ಥಿಗಳು, ಸರ್ಕಾರ ಮತ್ತು ಚುನಾವಣಾ ಆಯೋಗ ಸೇರಿದಂತೆ ಚುನಾವಣೆಗಳಿಗೆ ಸಂಬಂಧಿಸಿದ ಎಲ್ಲಾ ಖರ್ಚುಗಳನ್ನು ನೇರ ಅಥವಾ ಪರೋಕ್ಷವಾಗಿ ಒಳಗೊಂಡಿರುತ್ತದೆ ಎಂದು ಭಾಸ್ಕರ ರಾವ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಬಿಜೆಪಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಏರಲು ಯತ್ನಿಸುತ್ತಿದ್ದು, ಪ್ರಚಾರಗಳಲ್ಲಿ ಪಕ್ಷದ ಪ್ರಬಲ ಉಪಸ್ಥಿತಿಯನ್ನು ಉದ್ಯಮ ವೀಕ್ಷಕರು ಗಮನಿಸಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಭಾಸ್ಕರ ರಾವ್ ಆರಂಭಿಕ ವೆಚ್ಚ ಅಂದಾಜು ರೂ.1.2 ಲಕ್ಷ ಕೋಟಿಯಿಂದ ರೂ. 1.35 ಲಕ್ಷ ಕೋಟಿ ರೂಪಾಯಿಯಷ್ಟಾಗಲಿದೆ ಎಂದು ಹೇಳಿದ್ದಾರೆ.