ನವದೆಹಲಿ: ತಿಹಾರ್ ಜೈಲಿನಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ತಮ್ಮ ಕುಟುಂಬದೊಂದಿಗೆ ವೈಯಕ್ತಿಕವಾಗಿ ಭೇಟಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ಎಎಪಿ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ಸಿಂಗ್, ಜೈಲಿನಲ್ಲಿ ಕೇಜ್ರಿವಾಲ್ ಅವರ ನೈತಿಕ ಸ್ಥೈರ್ಯ ಕುಗ್ಗಿಸುವ ಯತ್ನ ನಡೆಯುತ್ತಿದೆ ಎಂದರು.
'ಕೇಜ್ರಿವಾಲ್ ಅವರಿಗೆ ಕುಟಂಬದೊಂದಿಗೆ ವೈಯಕ್ತಿಕವಾಗಿ ಭೇಟಿಯಾಗಲು ಬಿಡುತ್ತಿಲ್ಲ. ಕಬ್ಬಿಣದ ಬಲೆಯ ಆಚೆ ನಿಂತು ಮಾತನಾಡಲು ಅವಕಾಶ ನೀಡಲಾಗುತ್ತಿದೆ. ಇದು ಅವಮಾನವೀಯ. ದೊಡ್ಡ ದೊಡ್ಡ ಕ್ರಿಮಿನಲ್‌ಗಳಿಗೂ ವೈಯಕ್ತಿಕ ಭೇಟಿಗೆ ಅವಕಾಶ ನೀಡಲಾಗುತ್ತಿದೆ' ಎಂದು ಕಿಡಿಕಾರಿದರು.
ಸಂಜಯ್ ಸಿಂಗ್ ಅವರ ಆರೋಪಗಳಿಗೆ ತಿಹಾರ್ ಜೈಲಿನ ಅಧಿಕಾರಿಗಳು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೇಜ್ರಿವಾಲ್ ಭೇಟಿಯಾಗಲು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರಿಗೆ ಏಪ್ರಿಲ್ 15ರಂದು ದಿನಾಂಕ ನಿಗದಿ ಮಾಡಲಾಗಿದೆ. ಮಾನ್ ಅವರಿಗೂ ವೈಯಕ್ತಿಕ ಭೇಟಿಗೆ ಅವಕಾಶ ನಿರಾಕರಿಸಿದ್ದು, ಸಾಮಾನ್ಯ ಭೇಟಿಗೆ ಅನುಮತಿಸಲಾಗಿದೆ.
ಮಂಗಳವಾರ ಪತ್ನಿ ಸುನೀತಾ ಕೇಜ್ರಿವಾಲ್ ಮತ್ತು ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರು ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದರು.