ಸಮಯಸಾಧಕರು ಅಥವಾ ಅವಕಾಶವಾದಿಗಳ ಬಗ್ಗೆ ಎಚ್ಚರದಿಂದ ಇರಬೇಕು ಎನ್ನುವ ಕಿವಿಮಾತನ್ನು ಚಿಕ್ಕಂದಿನಿಂದ ಕೇಳಿರುತ್ತೇವೆ. ಒಳ್ಳೆಯ ಕಾಲದಲ್ಲಿ ಹಿತೈಷಿಗಳ ಸೋಗಿನಲ್ಲಿ ಇದ್ದು, ಕೆಟ್ಟ ಕಾಲ ಬಂದಾಗ ಅದರ ಲಾಭವನ್ನು ಪಡೆದು, ಈಗಾಗಲೇ ನೊಂದಿರುವವರನ್ನು ಮತ್ತಷ್ಟು ತುಳಿದು ಸಂತಸ ಪಡುವ ಮಂದಿಯನ್ನು ಒಂದಲ್ಲ ಒಂದು ಬಾರಿಯಾದರೂ ಕಂಡಿರುತ್ತೇವೆ.
ಸಮಯಸಾಧಕ ಸೋಂಕುಗಳು ಯಾರಲ್ಲಿ ಉಂಟಾಗುತ್ತವೆ?
ಮುಖ್ಯವಾಗಿ ಶರೀರದ ರೋಗನಿರೋಧಶಕ್ತಿ ಕುಂಠಿತವಾದಾಗ ಅದರ ಅವಕಾಶ ಪಡೆದು ಇಂತಹ ಸೋಂಕು ತಗುಲುತ್ತದೆ. ಅಪೌಷ್ಟಿಕತೆ, ವೃದ್ಧಾಪ್ಯ, ಮಧುಮೇಹ, ಭೌತಿಕ ಹಾಗೂ ಮಾನಸಿಕ ದಣಿವು, ಖಿನ್ನತೆ, ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯ ವೇಳೆ ಬಳಸುವ ಔಷಧಗಳ ಬಳಕೆ, ಎಚ್.ಐ.ವಿ. ವೈರಸ್ ಸೋಂಕಿನಿಂದ ಉಂಟಾಗುವ ಏಡ್ಸ್ ಕಾಯಿಲೆ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಔಷಧಗಳ ಪರಿಣಾಮ, ರೋಗನಿರೋಧ ಪ್ರಕ್ರಿಯೆಗೆ ಅಡ್ಡಿ ಮಾಡಬಲ್ಲ ಜೆನೆಟಿಕ್ ದೋಷಗಳು, ಚರ್ಮ ಸೀಳುವಂತಹ ಸಂದರ್ಭಗಳು, ಹೆಚ್ಚು ಆಯಂಟಿಬಯಾಟಿಕ್ ಬಳಕೆ, ಸುಟ್ಟ ಗಾಯಗಳು, ಗರ್ಭಿಣಿಯರು, ಶಸ್ತ್ರಚಿಕಿತ್ಸೆಗಳ ನಂತರದ ಕಾಲ, ಜನ್ಮಜಾತವಾಗಿ ಬರುವ ರೋಗನಿರೋಧಶಕ್ತಿಯ ದೌರ್ಬಲ್ಯ ಮೊದಲಾದ ಸಂದರ್ಭಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ರೋಗನಿರೋಧಶಕ್ತಿ ನಿತ್ರಾಣವಾಗುತ್ತದೆ. ಈ ಎಲ್ಲ ಸಂದರ್ಭಗಳಲ್ಲೂ ಸಮಯಸಾಧಕ ಪರೋಪಜೀವಿಗಳು ಆಕ್ರಮಣ ಮಾಡಿ ಸೋಂಕು ಉಂಟುಮಾಡಬಲ್ಲವು. ಸಣ್ಣ ವಯಸ್ಸಿನಲ್ಲಿ ಬಹುತೇಕ ಎಲ್ಲರನ್ನೂ ಕಾಡುವ ಸೀತಾಳೆ ಸಿಡುಬು (ಚಿಕನ್ ಪಾಕ್ಸ್) ಮೂಲತಃ ವೈರಸ್ ಕಾಯಿಲೆ. ಇದು ಗುಣವಾದ ನಂತರವೂ ಅದರ ವೈರಸ್ ನಮ್ಮ ಬೆನ್ನುಹುರಿಯ ನರಗಳ ಗಂಟುಗಳಲ್ಲಿ ಸುಪ್ತವಾಗಿ ಕುಳಿತಿರುತ್ತದೆ. ರೋಗನಿರೋಧಶಕ್ತಿ ಇಳಿದ ಅವಕಾಶ ದೊರೆತಾಗ ಈ ವೈರಸ್ ಪುನಃ ಆಕ್ರಮಣಶೀಲವಾಗಿ ಆಯಾ ನರದ ಮೂಲಕ ಸಾಗುತ್ತಾ ಚರ್ಮದ ಮೇಲೆ ಒಂದು ನಿರ್ದಿಷ್ಟ ಪಟ್ಟಿಯಂತೆ ಸೋಂಕು ಕಾಣುತ್ತದೆ. ಇದನ್ನು 'ಸರ್ಪಸುತ್ತು' ಅಥವಾ 'ಹರ್ಪಿಸ್ ಝೋಸ್ಟರ್: ಎನ್ನುತ್ತಾರೆ. ವೃದ್ಧಾಪ್ಯದಲ್ಲಿ ಶರೀರವನ್ನು ಬಹಳ ಕಂಗಾಲು ಮಾಡುವ ಸಮಯಸಾಧಕ ಸೋಂಕುಗಳಲ್ಲಿ ಸರ್ಪಸುತ್ತು ಕೂಡ ಒಂದು.
ಸಮಯಸಾಧಕ ಸೋಂಕುಗಳನ್ನು ಗುಣಪಡಿಸುವುದು ಸುಲಭವಲ್ಲ. ರೋಗನಿರೋಧಶಕ್ತಿ ಈ ಮೊದಲೇ ಕುಂಠಿತವಾಗಿರುವುದರಿಂದ ಇಂತಹ ಸೋಂಕುಗಳ ವಿರುದ್ಧ ಹೋರಾಡಲು ಶರೀರ ಸಮರ್ಥವಾಗಿರುವುದಿಲ್ಲ. ಹೀಗಾಗಿ, ಸಮಯಸಾಧಕ ಸೋಂಕುಗಳು ಶರೀರದ ಮೇಲೆ ವಿಪರೀತ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ. ಅದರಲ್ಲೂ ಫಂಗಸ್ ಸೋಂಕುಗಳಿಂದ ಕೆಲವೊಮ್ಮೆ ಪ್ರಾಣಾಪಾಯವೂ ಆಗಬಹುದು. ಕೋವಿಡ್-19 ಎಂಬ ಜಾಗತಿಕ ವಿಪತ್ತಿನ ಸಂದರ್ಭದಲ್ಲಿ ಹಲವಾರು ಸಮಯಸಾಧಕ ಸೋಂಕುಗಳಿಂದ ಪ್ರಾಣ ತೆತ್ತವರು ಬಹಳ ಸಂಖ್ಯೆಯಲ್ಲಿ ಇದ್ದರು. ಈ ಕಾರಣಕ್ಕೆ ಸಮಯಸಾಧಕ ಸೋಂಕುಗಳನ್ನು ಬಾರದಂತೆ ಎಚ್ಚರ ವಹಿಸುವುದು ಅವುಗಳ ಚಿಕಿತ್ಸೆಗಿಂತಲೂ ಹೆಚ್ಚು ಫಲದಾಯಕ.
ರೋಗನಿರೋಧಶಕ್ತಿ ನಿತ್ರಾಣವಾಗಬಹುದಾದ ಸಂದರ್ಭಗಳಲ್ಲಿ ಅವು ಯಾವ ಸೋಂಕಿಗೆ ಕಾರಣವಾಗಬಹುದು ಎಂಬ ಅಂದಾಜುಗಳನ್ನು ತಜ್ಞವೈದ್ಯರು ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ಸೋಂಕು ಕಾಡುವ ಮುನ್ನವೇ ಔಷಧೋಪಚಾರ ಆರಂಭಿಸುತ್ತಾರೆ. ಈ ಮಾರ್ಗವನ್ನು 'ನಿಯಂತ್ರಕ ಚಿಕಿತ್ಸೆ' ಎನ್ನಲಾಗುತ್ತದೆ. ಇದು ಪ್ರತಿಯೊಂದು ಸೋಂಕಿನ ವಿರುದ್ಧವೂ ಕೆಲಸ ಮಾಡುತ್ತದೆ ಎನ್ನುವ ಖಚಿತವಾದ ಭರವಸೆ ಇಲ್ಲವಾದರೂ, ಬಹುತೇಕ ಸಂದರ್ಭಗಳಲ್ಲಿ ಸೋಂಕು ಬಾರದಂತೆ ಕಾಯಬಲ್ಲವು. ಅಂತೆಯೇ, ಮೂಲರೋಗವನ್ನು ಶೀಘ್ರವಾಗಿ ತಹಬಂದಿಗೆ ತಂದು ರೋಗನಿರೋಧಶಕ್ತಿ ಯಥಾಸ್ಥಿತಿಗೆ ಮರಳುವಂತೆ ಮಾಡುವುದು ಕೂಡ ಸಮಯಸಾಧಕ ಸೋಂಕುಗಳನ್ನು ತಡೆಗಟ್ಟುವ ಪ್ರಮುಖ ಮಾರ್ಗ. ಉದಾಹರಣೆಗೆ, ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಅಂಶದ ನಿಯಂತ್ರಣ ಎಷ್ಟು ಕಟ್ಟುನಿಟ್ಟಾಗಿದ್ದರೆ, ಸಮಯಸಾಧಕ ಸೋಂಕುಗಳ ಸಾಧ್ಯತೆ ಅಷ್ಟು ಕಡಿಮೆ. ಎಚ್.ಐ.ವಿ. ಸೋಂಕಿತರಲ್ಲಿ ಪ್ರಾಥಮಿಕ ಚಿಕಿತ್ಸೆಯ ಮೂಲಕ ರಕ್ತದಲ್ಲಿನ ವೈರಸ್ ಪ್ರಮಾಣವನ್ನು ಮಿತಿಯಲ್ಲಿ ಇಟ್ಟುಕೊಂಡರೆ ಇತರೆ ಸೋಂಕುಗಳ ಸಾಧ್ಯತೆಯನ್ನು ಗಣನೀಯವಾಗಿ ನಿಯಂತ್ರಿಸಬಹುದು.
ಶರೀರದ ಸಹಜ ರೋಗನಿರೋಧಶಕ್ತಿಯನ್ನು ಜಾಗೃತಗೊಳಿಸಬಲ್ಲ ರಾಸಾಯನಿಕ ಸಂಯುಕ್ತಗಳು ಪ್ರಸ್ತುತ ಲಭ್ಯವಿವೆ. ಆದರೆ ಕೆಲವು ಆಯ್ದ ರೋಗಿಗಳಲ್ಲಿ ಮಾತ್ರ ಈ ಅತ್ಯಂತ ದುಬಾರಿ ಔಷಧಗಳ ಬಳಕೆ ಪ್ರಯೋಜನಕಾರಿಯಾಗಬಲ್ಲವು. ಮತ್ತೆ ಕೆಲವರಲ್ಲಿ ನಿಯಮಿತವಾಗಿ ಆಯಂಟಿಬಯಾಟಿಕ್ ಔಷಧಗಳನ್ನು ಬಳಸುತ್ತಾ ಕೆಲವೊಂದು ಸಮಯಸಾಧಕ ಸೋಂಕು ಆಗದಂತೆ ತಡೆಯಬಹುದು. ಇಂತಹ ಸೋಂಕುಗಳ ಸಾಧ್ಯತೆ ಹೆಚ್ಚಾಗಿರುವವರು ಮಾಸ್ಕ್ ಬಳಕೆ, ಅಶುಚಿಯುತ ಆಹಾರವನ್ನು ಸೇವಿಸದಿರುವುದು, ಇತರ ರೋಗಿಗಳಿಂದ ದೂರವಿರುವುದು, ಸಾಕುಪ್ರಾಣಿಗಳನ್ನು ಮುದ್ದಾಡದಿರುವುದು, ಕೊಳಕಾದ ಸ್ಥಳಗಳಿಗೆ ಹೋಗದಿರುವುದು, ಲೈಂಗಿಕ ಸಂಪರ್ಕದಲ್ಲಿ ಎಚ್ಚರಿಕೆ ಮೊದಲಾದ ವಿಧಾನಗಳನ್ನು ಪಾಲಿಸಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಇವೆಲ್ಲವನ್ನೂ ಮೀರಿ ಸಮಯಸಾಧಕ ಸೋಂಕು ಕಾಡಿದರೆ ತಡಮಾಡದೆ ತಜ್ಞವೈದ್ಯರನ್ನು ಕಾಣಬೇಕು. ಇಂತಹ ಸೋಂಕುಗಳ ಚಿಕಿತ್ಸೆಯನ್ನು ಎಷ್ಟು ಬೇಗ ಆರಂಭಿಸಿದರೆ ಅಷ್ಟೇ ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸಬಹುದು. ಇದರ ಬಗೆಗಿನ ಜ್ಞಾನ ಮತ್ತು ಎಚ್ಚರಗಳು ಜೀವರಕ್ಷಕವಾಗಬಲ್ಲವು.